ಬೆಂಗಳೂರು: ನಿನ್ನೆ ಇಡೀ ರಾತ್ರಿ ಸುರಿದ ಮಳೆಗೆ ರಾಜ್ಯಾದ್ಯಂತ ಸಮಸ್ಯೆ ಎದುರಾಗಿದೆ. ಕೆರೆಗಳಿಗೆ, ಹಳ್ಳ ಕೊಳ್ಳಗಳಲ್ಲಿ ಮತ್ತೆ ನೀರು ತುಂಬಿದ್ದು, ಬೆಳೆನಾಶವಾಗಿದೆ. ಕೆರೆಗಳ ಅಕ್ಕ ಪಕ್ಕ ಇದ್ದ ಜಮೀನುಗಳಂತು ಸಂಪೂರ್ಣ ಜಲಾವೃತವಾಗಿದೆ. ಇದರಿಂದ ರೈತರು ಅಕ್ಷರಶಃ ಆತಂಕಗೊಂಡಿದ್ದಾರೆ. ಯಾವ್ಯಾವ ಜಿಲ್ಲೆಯಲ್ಲಿ ಮಳೆಯಿಂದ ಅನಾಹುತವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಚಾಮರಾಜನಗರ ಜಿಲ್ಲೆಯಲ್ಲೂ ಮಳೆ ನಿನ್ನೆ ರಾತ್ರಿ ಬೆಂಬಿಡದೆ ಮಳೆ ಸುರಿದಿದೆ. ಇದರ ಪರಿಣಾಮ ಬೆಳೆ ನಾಶವಾಗಿದೆ. ಕಬ್ಬು, ಅರಿಶಿನ, ಬಾಳೆ ಬೆಳೆ ಪ್ರದೇಶದಲ್ಲಿ ಸಂಪೂರ್ಣ ನೀರು ನಿಂತಿದೆ. ಸುವರ್ಣಾವತಿ, ಚಿಕ್ಕಹೊಳಿ ಜಲಾಶಯ ತುಂಬಿ ಹರಿಯುತ್ತಿದೆ. ಇನ್ನು ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಹವಮಾನ ಇಲಾಖೆ ಸೂಚನೆ ನೀಡಿದೆ.
ತುಮಕೂರಿನಲ್ಲೂ ಮಳೆಯ ಆರ್ಭಟ ಜೋರಾಗಿದೆ. ಇಲ್ಲಿಯೂ ಪರಿಸ್ಥಿತಿ ಹದಗೆಟ್ಟಿದೆ. ಹಲವು ಮನೆಗಳಿಗೆ ನೀರು ನುಗ್ಗಿ, ನೀರನ್ನು ಹೊರಗೆ ಹಾಕಲು ಜನ ಹರಸಾಹಸ ಪಡುತ್ತಿದ್ದಾರೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜಿಲ್ಲೆಯ ಚಿನ್ನಸಾಗರ ಜನರ ಪರದಾಟ ನಡೆಸುವಂತ ಸ್ಥಿತಿ ಎದುರಾಗಿದೆ.
ಕೋಲಾರದಲ್ಲಿಯೂ ಮಳೆ ಕಡಿಮೆ ಏನಿಲ್ಲ. ರಾತ್ರಿ ಇಡೀ ಸುರಿದ ಮಳೆಗೆ ಗುಲಾಬಿ ತೋಟ ಹಾಳಾಗಿದೆ. ಜಿಲ್ಲೆಯ ವಿಜಯನಗರದಲ್ಲಿರುವ ಗುಲಾಬಿ ಬೆಳೆ ಜಲಾವೃತ. ಸುಮಾರು 2 ಎಕರೆ ಗುಲಾಬಿ ತೋಟ ಇದಾಗಿದೆ. ಗುಲಾಬಿ ಬೆಳೆ ಜಲಾವೃತವಾದ ಕಾರಣ ರೈತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಇನ್ನು ಕೋಲಾರದ ಅಮ್ಮೇರಹಳ್ಳಿ ಕೆರೆ ಕೂಡ ತುಂಬಿ ಹರಿಯುತ್ತಿದೆ. ಕೆರೆ ಕೋಡಿಯಿಂದಾಗಿ ಬೆಳೆನಾಶವಾಗಿದೆ. ರಾಜಕಾಲುವೆ ಒತ್ತುವರಿಯಿಂದಾಗಿ ಹೊಲಗಳಿಗೆ ನೀರು ನುಗ್ಗಿದೆ. ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜೋರು ಮಳೆಯಾಗಿದೆ. ಮಳೆಯ ಹಲವು ಪರಿಣಾಮ ಎದುರಾಗಿದೆ.