ಬೆಂಗಳೂರು: ಕಳೆದ ಎರಡು ದಿನದಿಂದ ಜೋರು ಶೆಖೆಯಾಗುತ್ತಿದೆ. ರಾತ್ರಿಯೆಲ್ಲಾ ಮಳೆ ಸುರಿದರೂ ಬೆಳಗ್ಗೆ ಬಿಸಿಲು ಜೋರಾಗಿ ಬಡಿಯುತ್ತಿದೆ. ಇದರಿಂದ ದೇಹ ಬೆವರುವುದಕ್ಕೆ ಶುರು ಮಾಡಿದೆ. ಆದರೆ ಶೆಕೆಯ ನಡುವೆಯೂ ಹವಮಾನ ಇಲಾಖೆ ಮಳೆಯ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ಮತ್ತು ನಾಳೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಎರಡು ದಿನಗಳ ಕಾಲ ಹೊರಗೆ ಓಡಾಡುವ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಮತ್ತು ನಾಳೆ ಈ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆಯ ಜೊತೆಗೆ ಬಿಸಿಲು ಇರುವ ಕಾರಣ ಜನ ಗೊಂದಲಕ್ಕೀಡಾಗಿದ್ದಾರೆ.
ಈಗಷ್ಟೇ ಬಿತ್ತನೆ ಮಾಡುವುದಕ್ಕೆ ಜಮೀನು ಉಳುಮೆ ಮಾಡಿದ್ದಾರೆ. ಇಷ್ಟೊಂದು ಶೆಕೆಯಾದರೆ ಮಳೆ ಏನಾದರೂ ಹೋಗಿ ಬಿಡ್ತಾ ಎಂಬ ಆತಂಕ ರೈತರಲ್ಲಿ ಕಾಡಿದೆ. ಆದರೆ ಒಮ್ಮೊಮ್ಮೆ ಬೆಳಗ್ಗೆ ಜೋರು ಬಿಸಿಲು ಕಾಣಿಸಿಕೊಂಡರೆ ಮಧ್ಯಾಹ್ನದ ವೇಳೆಗೆ ಅಥವಾ ಸಂಜೆ ವೇಳೆಗೆ ಮಳೆ ಬರಲಿದೆ ಎಂದು ಹಿರಿಯರು ಹೇಳುತ್ತಾರೆ. ಅದರಂತೆಯೇ ಈಗ ಸಂಜೆ ವೇಳೆಗೆ ಮಳೆ ಬರುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.