ಬೆಂಗಳೂರು: ಕ್ಯಾನ್ಸರ್ ಗೊಳಗಾದ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಗತ್ಯ. ಆದ್ದರಿಂದ ಬಡ ಕುಟುಂಬಗಳಲ್ಲಿ ಕ್ಯಾನ್ಸರ್ ಗೊಳಗಾದ ಮಕ್ಕಳಿಗಾಗಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಅನ್ನು ಉಚಿತವಾಗಿ ಲಭ್ಯವಾಗಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನ ಅಂಗವಾಗಿ ದಾನಿ ರಾಜಶೇಖರ್ ಅವರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿರುವ ಮೆಡಿಕಲ್ ಐಸಿಯುಗೆ ಭೂಮಿ ಪೂಜೆಯನ್ನು ಸಚಿವ ಡಾ.ಕೆ.ಸುಧಾಕರ್ ನೆರವೇರಿಸಿದರು. ಬಳಿಕ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಸೌಲಭ್ಯಕ್ಕೆ ಸಚಿವರು ಚಾಲನೆ ನೀಡಿದರು.

ನಂತರ ಮಾತನಾಡಿ, ಮಕ್ಕಳು ಸದಾ ಆರೋಗ್ಯದಿಂದ ಇರಬೇಕು. ಕ್ಯಾನ್ಸರ್ ಗೆ ತುತ್ತಾದ ಮಕ್ಕಳಿಗೆ ಸರ್ಕಾರ ಅತ್ಯುತ್ತಮ ಚಿಕಿತ್ಸೆ ನೀಡಲಿದೆ. ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸರ್ಕಾರ, ರಾಜ್ಯವನ್ನು ಆರೋಗ್ಯ ಕರ್ನಾಟಕ ಮಾಡಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ಬಡವರಿಗೆ ಕೈಗೆಟುಕದ ಚಿಕಿತ್ಸೆಯಾಗಿದೆ. ಹೀಗಾಗಿ ಸರ್ಕಾರ ಇದನ್ನು ಉಚಿತವಾಗಿ ಸಿಗುವಂತೆ ಮಾಡಲು ಕ್ರಮ ಕೈಗೊಂಡಿದೆ. ಈಗ ಇಬ್ಬರು ಮಕ್ಕಳಿಗೆ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಮುಂದೆ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದರು.


