ಬೆಳಗಾವಿ: ಮಳೆಯ ಅವಾಂತರ ರಾಜ್ಯದಲ್ಲಿ ಇನ್ನು ನಿಂತಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಂತು ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಘಟಪ್ರಭಾ ಜಲಾಶಯದಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನಿಂದ ಈಗಾಗಲೇ 26 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ಹುಕ್ಕೇರಿ, ಗೋಕಾಕ್ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿವೆ. ಒಳಹರಿವು ಹೆಚ್ಚಾದ್ರೆ ಇನ್ನಷು ನೀರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ ಗೋಕಾಕ್ ಪಟ್ಟಣಕ್ಕೆ ಮಲಪ್ರಭಾ ನೀರು ನುಗ್ಗಿದೆ. ಮಂಡಕ್ಕಿ ಗೋದಾಮನ್ನು ಸಿಬ್ಬಂದಿ ಖಾಲಿ ಮಾಡಿದ್ದಾರೆ. ಮಟನ್ ಮಾರ್ಕೆಟ್ ಕಂಪ್ಲೀಟ್ ಜಲಾವೃತವಾಗಿದೆ. ನೆರೆ ಭೀತಿಯಿದ ಸುರಕ್ಷಿತ ಸ್ಥಳಗಳಿಗೆ ಜನ ತೆರಳುತ್ತಿದ್ದಾರೆ. ಮಳೆ ಅವಾಂತರದಿಂದ ಜನ ಬೇಸತ್ತು ಹೋಗಿದ್ದಾರೆ.
ವಿಜಯಪುರದಲ್ಲಿ ಭೀಮಾ ನದಿ ತುಂಬಿ ಹರಿಯುತ್ತಿದೆ. ಉಜಿನಿ ಡ್ಯಾಂನಿಂದ ಈಗಾಗಲೇ 50 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಹೀಗಾಗಿ ಡಂಗೂರ ಸಾರಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ದನ ಕರುಗಳನ್ನು ಭೀಮಾ ನದಿ ತೀರಕ್ಕೆ ಕರೆದೊಯ್ಯಬಾರದು ಎಂದು ತಹಶೀಲ್ದಾರ್ ಕಚೇರಿಯಿಂದ ಆದೇಶ ನೀಡಲಾಗಿದೆ.