ರಾಮನಗರ: ದಶಪಥ ರಸ್ತೆ ಆರಂಭವಾಗಿ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಕಳೆದಿವೆ. ಆದ್ರೆ ಆ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಸುಸ್ತೆದ್ದು ಹೋಗಿದ್ದಾರೆ. ಒಂದೊಂದು ಕಿಲೋ ಮೀಟರ್ ಊಹೆ ಮಾಡುವುದಕ್ಕೆ ಆಗದಷ್ಟು ಹಣ ಕೇಳುತ್ತಿದ್ದಾರೆ. ಜೊತೆಗೆ ಸ್ಥಳೀಯ ವಾಹನವೆಂದರೂ ಬಿಡದೆ, ಸರ್ವೀಸ್ ರಸ್ತೆಯನ್ನು ತೆರೆಯದೆ ಜನರಿಂದ ಲೂಟಿ ಮಾಡುತ್ತಿದ್ದಾರೆ.
ಜನರ ಆಕ್ರೋಶ ಕಂಡು ಇಂದು ನಿಖಿಲ್ ಕುಮಾರಸ್ವಾಮಿ ಕೂಡ ಜನರ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೆಜ್ಜಾಲ ಬಳಿಯ ಕಣಮಿನಕಿ ಟೋಲ್ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಎ ಮಂಜು ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಈ ವೇಳೆ ಮಾತನಾಡಿದ್ದು, ಪ್ರಧಾನಮಂತ್ರಿ ಉದ್ಘಾಟನೆ ಮಾಡಿದ ಮೇಲೆಯೇ ಜನರು ಇದು ಉದ್ಘಾಟನೆಯಾಗಿದೆಯಾ ಅಂತ ಕೇಳುತ್ತಾ ಇದ್ದಾರೆ. ಇಲ್ಲಿ ಇನ್ನೂ ಕೆಲವೂ ಕಾಮಗಾರಿಗಳು ಪೂರ್ಣವಾಗಿಲ್ಲ. ಸೃವೀಸ್ ರಸ್ತೆ ಓಪನ್ ಆಗಿಲ್ಲ. ಟೋಲ್ ಸಂಗ್ರಹ ಮಾತ್ರ ತರಾತುರಿಯಲ್ಲಿ ಮಾಡ್ತಾ ಇದ್ದಾರೆ. 120 ಕಿ.ಮೀ ಹೋಗುವವರು 120 ರೂಪಾಯಿ ಕಟ್ಟಬೇಕು. ಆರ್ಥಿಕವಾಗಿ ಶಕ್ತಿ ಇಲ್ಲದವರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.