ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಹೆಚ್ಚಾಗುವ ಸಂಭವವಿದ್ದು, ಕೂಡಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ, ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ವಾಗುವುದನ್ನು ತಡೆಯಬೇಕು. ಹೂವಿನ ಕುಂಡ, ಬೀಸಾಕಿದ ಟೈಯರ್, ನೀರು ಸಂಗ್ರಹಿಸುವ ತೊಟ್ಟಿ, ಸಜ್ಜೆ, ನೀರಿನ ಬಾಟಲ್ ಸೇರಿದಂತೆ ಇನ್ನಿತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸಂಬಂಧ ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸೂಕ್ತ ಅಗತ್ಯಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಾಗಿ ಹರಡಲಿದ್ದು, ನೀರು ಸಂಗ್ರಹವಾಗುವ ಸ್ಥಳಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸೊಳ್ಳೆ ತಾಣಗಳನ್ನು ಗುರುತಿಸಿ ನಾಶ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.