ದಾವಣಗೆರೆ: ಚನ್ನಗಿರಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಸದ್ಯ ಆರು ದಿನದಿಂದ ಯಾರ ಕಣ್ಣಿಗೂ ಬೀಳದೆ, ತಲೆ ಮರೆಸಿಕೊಂಡಿದ್ದರು. ಮಧ್ಯಂತರ ಜಾಮೀನು ಸಿಗುತ್ತಿದ್ದಂತೆಯೇ ಈಗ ಮಾಧ್ಯಮದವರ ಎದುರು ಹೇಳಿಕೆ ನೀಡುತ್ತಿದ್ದಾರೆ. ಜಾಮೀನು ಸಿಕ್ಕ ಬೆನ್ನಲ್ಲೇ ಎಲ್ಲರ ಎದುರು ಬಂದಿದ್ದ ವಿರೂಪಾಕ್ಷಪ್ಪ, ನನ್ನನ್ನು ಪಕ್ಷ ಉಚ್ಛಾಟನೆ ಮಾಡಿದೆ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದಿದ್ದರು. ಆದ್ರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ.
ಮಾಧ್ಯಮದವರೊಂದಿಗೆ ಮತ್ತೆ ಮಾತನಾಡಿದ ವಿರೂಪಾಕ್ಷಪ್ಪ, ಪಕ್ಷ ನನ್ನ ಉಚ್ಛಾಟನೆ ಮಾಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಮಾಧ್ಯಮಗಳು ವಾಸ್ತವ ಬಿತ್ತರಿಸಬೇಕು. ನಾನು ಸಜ್ಜನ ರಾಜಕಾರಣಿ. ನನ್ನ ಮೇಲಿನ ಆರೋಪ ನಿರಾಧಾರ. ಸತ್ಯಕ್ಕೂ ದೂರವಾದ ಮಾತು ಅದು. 40 ಲಕ್ಷ ಸಿಕ್ಕಿರುವುದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ್ದು, ಈ ಕ್ಷೇತ್ರದ ಜನ ನನಗೆ ದೇವರಿದ್ದಂತೆ. ಅವರ ಮೇಲೆ ಆಣೆ ಮಾಡ್ತೀನಿ. ಇದರ ಬಗ್ಗೆ ನನಗೆ ಏನು ಗೊತ್ತಿಲ್ಲ. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಯಲ್ಲಿಯೇ ಇದ್ದೆ. ಕಾನೂನಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಸಿಎಂ ಮಾತಿಗೆ ಬೆಲೆ ಕೊಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೀನಿ. ಪಕ್ಷ ಉಚ್ಛಾಟನೆ ಮಾಡಿಲ್ಲ ಎಂದಿದ್ದಾರೆ.