ಚಿಕ್ಕಮಗಳೂರು: ಕಾಡಾನೆ ದಾಳಿಯಿಂದಾಗಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನಾಕಾರರು ಹಾಗೂ ಶಾಸಕರ ನಡುವೆ ದೊಡ್ಡ ಗಲಾಟೆಯೇ ನಡೆದಿದೆ. ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ಬಂದ ಶಾಸಕರ ವಿರುದ್ಧ ಜನ ತಿರುಗಿ ಬಿದ್ದಿದ್ದರು. ಬಟ್ಟೆಯನ್ನೆಲ್ಲಾ ಹರಿದು, ನಾಯಿಗೆ ಹೊಡೆದಂತೆ ಹೊಡೆದರು ಎಂದು ಶಾಸಕ ಕುಮಾರಸ್ವಾಮಿ ಆರೋಪಿಸಿದ್ದರು. ಇದೀಗ ಗೃಹ ಸಚಿವರ ಮೇಲೆ ಅಸಮಾಧಾನಗೊಂಡಿದ್ದಾರೆ.
ನಾನೊಬ್ಬ ದಲಿತ ಶಾಸಕನೆಂಬ ಕಾರಣಕ್ಕೆ ಮೊನ್ನೆ ನನ್ನ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಗೃಹ ಸಚಿವರು ಸೌಜನ್ಯಕ್ಕೂ ಮಾತನಾಡಿಸಿಲ್ಲ. ವಿಷಾದವನ್ನು ವ್ಯಕ್ತಪಡಿಸಿಲ್ಲ. ನಾನು ದೂರು ಕೊಡಲಿಲ್ಲ. ನಾನು ಕುಮಾರಸ್ವಾಮಿ ಅಲ್ಲ. ನಾನೊಬ್ಬ ಶಾಸಕ ಎಂದು ಬೇಸರ ಹೊರ ಹಾಕಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೌಜನ್ಯಕ್ಕೂ ನನ್ನನ್ನು ಕರೆದು ಮಾತನಾಡಿಸಿಲ್ಲ. ಏನಾಯ್ತು ಎಂದು ಕೇಳುವ ಗೋಜಿಗೂ ಹೋಗಿಲ್ಲ. ಜನಪ್ರತಿನಿಧಿಗಳಿಗೆ ಈ ರೀತಿ ಆದರೆ, ಸಾಮಾನ್ಯ ಜನರ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ. ನಾವೇನು ಜನರಿಂದ ಹೊಡೆಸಿಕೊಳ್ಳೋಕೆ ಇರೋದಾ..? ನಾನು ಆನೆ ಹಾಕುವುದಕ್ಕೆ ಆಗುತ್ತಾ..? ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಗೃಹ ಸಚಿವರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.