ಮಂಡ್ಯ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋಗಿದ್ದರು ಎಂಬ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷದ ನಾಯಕರು ಕೂಡ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಆ ವಿಚಾರಕ್ಕೆ ಸ್ವತಃ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮಾಂಸಾಹಾರ ತಿಂದು ದೇವಸ್ಥಾನದ ಒಳಗೆ ಹೋಗಿಲ್ಲ ರೀ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ರೋಡಿನಲ್ಲಿಯೇ ನಿಂತು ದೇವರ ದರ್ಶನ ಪಡೆದಿದ್ದೇನೆ. ನಾನು ಮಾಂಸಾಹಾರ ತಿನ್ನುವ ಜಾತಿಯಲ್ಲಿಯೇ ಹುಟ್ಟಿದ್ದೇನೆ. ಆದರೆ ಮಾಂಸಾಹಾರ ತಿಂದು ದೇವಸ್ಥಾನದ ಒಳಗೆ ಹೋಗಿಲ್ಲ. ಸುಮ್ಮನೆ ಒಂದು ವಿವಾದ ಮಾಡಬೇಕೆಂದು ಕೆಲವರು ಹೀಗೆ ಮಾಡುತ್ತಾರೆ. ನಾನು ಹೋದಾಗ ದೇವಾಲಯ ಬೀಗ ಹಾಕಿತ್ತು. ಹೊರಗೆ ನಿಂತು ಕೈ ಮುಗಿದು ಬಂದಿದ್ದೇನೆ ಎಂದಿದ್ದಾರೆ.
ಪ್ರತಿ ವರ್ಷ ದತ್ತ ಮಾಲೆ ಹಾಕುತ್ತೇನೆ. ದೇವರ ಬಗ್ಗೆ ಶ್ರದ್ಧೆಯಿದೆ. ನವರಾತ್ರಿಯಲ್ಲಿ ವ್ರತದಲ್ಲಿರುತ್ತೇನೆ. ಮಾಂಸ ತಿನ್ನುತ್ತೇನೆ, ಹಾಗಂತ ತಿಂದು ದಾಷ್ಟ್ಯ ತೋರುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುತ್ತೀನಿ ಏನಿವಾಗ..? ಎಂಬಂತೆ ಸಿದ್ದರಾಮಯ್ಯನ ರೀತಿ ವರ್ತಿಸುವುದಿಲ್ಲ. ನಾನು ನಮ್ಮ ಧಾರ್ಮಿಕ ಭಾವನೆಗಳನ್ನು ಹೀಗಳೆಯುವುದಿಲ್ಲ ಎಂದಿದ್ದಾರೆ.