ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಜೆಡಿಎಸ್ ನ ಹಿರಿಯ ಮುಖಂಡ ಹೆಚ್.ನಿಂಗಪ್ಪ ಇಂದು ತಮ್ಮ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಗೆ ಇಂದಿನಿಂದ ಗುಡ್ ಬೈ ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರಿಗೆ ಕಳುಹಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಾಥಮಿಕ ಸ್ಥಾನ ತೊರೆಯುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ನಾನು ಜಾತ್ಯಾತೀತ ಜನತಾದಳದ ಸಕ್ರಿಯ ಕಾರ್ಯಕರ್ತನಾಗಿದ್ದು, ಹತ್ತು ವರ್ಷಗಳ ಕಾಲ ಪಕ್ಷದ ಜಿಲ್ಲಾಧ್ಯಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. 2013ರ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೆ ಇದ್ದ ಕಾರಣಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ.
ಇನ್ನು 2018 ರ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಮತ್ತೆ ಪಕ್ಷಕ್ಕೆ ಆಹ್ವಾನಿಸಿದ್ದರು. ಅವರು ನಮ್ಮ ಮೇಲಿದ್ದ ಪ್ರೀತಿ, ವಿಶ್ವಾಸಕ್ಕೆ ಮಣಿದು ಮತ್ತೆ ಜೆಡಿಎಸ್ ಗೆ ಸೇರ್ಪಡೆಯಾಗಿದ್ದೆ. ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಿ, ಅಭ್ಯರ್ಥಿಯ ಗೆಲ್ಲಿಸುವಲ್ಲಿ ಕೆಲಸ ಮಾಡಿದ್ದೇನೆ. ಚುನಾವಣೆಯ ನಂತರದ ವಿದ್ಯಾಮಾನಗಳು ಮತ್ತು ಆರೋಪಗಳನ್ನು ಮಾಡಲು ನನಗೆ ಇಷ್ಟವಿಲ್ಲ. ನಾನು ಪಕ್ಷಕ್ಕೆ ಮರಳಿದಾಗ ಪ್ರಾಥಮಿಕ ಸದಸ್ಯತ್ವವನ್ನು ಮತ್ತೆ ಪಡೆದಿದ್ದರೂ ಸಹ ಕುಮಾರಸ್ವಾಮಿ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದರು. ಆದರೆ ನನ್ನನ್ನು ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರ ಇಡಲಾಯಿತು. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.