ಜಮೀನು ವಿವಾದ : ತುಮಕೂರಿನಲ್ಲಿ ಅಡಿಕೆ ಗಿಡಗಳು ಬಲಿ..!
ತುಮಕೂರು: ಮರಗಿಡಗಳು ಮಕ್ಕಳಿದ್ದಂತೆ. ಇನ್ನು ಫಸಲು ಕೊಡುವ ಗಿಡ ಮರಗಳನ್ನು ದೇವರಂತೆಯೇ ಕಾಣುತ್ತಾರೆ. ಫಸಲು ಬರುವುದನ್ನು ಹಾಳು ಮಾಡುವ ಮನಸ್ಸನ್ನು ಯಾರು ಮಾಡುವುದಿಲ್ಲ. ಆದ್ರೆ ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಹುಲಿಯಾಪುರ ಗ್ರಾಮದಲ್ಲಿ ಫಸಲು ಬಂದ ಬೆಳೆಯನ್ನು ಲೆಕ್ಕಿಸದೆ ದ್ವೇಷ ಮಾತ್ರ ತೀರಿಸಿಕೊಂಡಿದ್ದಾರೆ. ಇದ್ದ ಹಳೆ ದ್ವೇಷದಿಂದ ಸುಮಾರು 126 ಅಡಿಕೆ ಗಿಡಗಳನ್ನು ಕತ್ತರಿಸಿ, ನೆಲಕ್ಕುರುಳಿಸಿದ್ದಾರೆ.
ಮಂಗಳಮ್ಮ ಎಂಬುವವರಿಗೆ ಸೇರಿದ ಅಡಿಕೆ ಗಿಡಗಳನ್ನು ಈ ರೀತಿ ನಾಶ ಮಾಡಿರುವುದು ಎಂಬುದು ತಿಳಿಸು ಬಂದಿದೆ. ಮಂಗಳಮ್ಮ ಸುಮಾರು 12 ಗುಂಟೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಬೆಳೆದಿದ್ದರು. ಈ ಜಮೀನಿಗೆ ಸಂಬಂಧಿಸಿದಂತೆ ಆಗಾಗ ಜಗಳಗಳು ನಡೆಯುತ್ತಿದ್ದವಂತೆ. ಇವರ ಸಂಬಂಧಿಗಳಾದ ಜಗದಂಬ ಮತ್ತು ರೇಣುಕಮ್ಮ ಎಂಬುವವರು ಈ ವಿಚಾರಕ್ಕೆ ಯಾವಾಗಲೂ ಜಗಳ ಮಾಡುತ್ತಿದ್ದರಂತೆ. ಇದೇ ದ್ವೇಷದಿಂದ ಗಿಡಗಳನ್ನು ಕಡಿದು ಹಾಕಿದ್ದಾರೆ ಎಂದು ಮಂಗಳಮ್ಮ ಆರೋಪಿಸಿದ್ದಾರೆ.
ಇನ್ನು ಬೆಳಗ್ಗಿನ ಜಾವ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜಗದಂಬಾ ಹಾಗೂ ರೇಣುಕಮ್ಮಾ ವಿರುದ್ಧವೂ ಪೊಲೀಸ್ ಠಾನೆಯಲ್ಲಿ ದೂರು ದಾಖಲಾಗಿದೆ.