ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಹತ್ತಿರವಿರುವಾಗಲೇ ಕಾರ್ಯಕರ್ತರಿಂದ ಕಾಂಗ್ರೆಸ್ ಗೆ ಶಾಕ್ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ 300ಕ್ಕೂ ಹೆಚ್ಚು ಕಾರ್ಯಕರ್ತರು ದಿಢೀರಂತ ಬಿಜೆಪಿ ಸೇರಿರುವ ಘಟನೆ ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ.
ಮಹಲ್ಗೋಡು ಗ್ರಾಮದ ಕಾರ್ಯಕರ್ತರು ಇವತ್ತು ಅವರ ಹಣದಲ್ಲಿಯೇ ಶಾಮಿಯಾನ ಹಾಕಿಕೊಂಡು, ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪಟ್ಟಿ ಧರಿಸಿ, ಬಿಜೆಪಿ ಬಾವುಟ ಹಿಡಿದು, ಬಿಜೆಪಿ ಪರ ಘೋಷಣೆ ಕೂಗಿದ್ದಾರೆ. ಸ್ಥಳೀಯ ಶಾಸಕ ರಾಜೇಗೌಡರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿರುವ ಸ್ಥಳೀಯರು, ಬಿಜೆಪಿಗೆ ಜೈಕಾರ ಹಾಕಿದ್ದಾರೆ.
ಒಂದೇ ಬಾರಿಗೆ ಇಷ್ಟೊಂದು ಕಾರ್ಯಕರ್ತರು ಪಕ್ಷಾಂತರ ಮಾಡಿರುವುದನ್ನು ಕಂಡು ಶೃಂಗೇರಿ ಶಾಸಕ ರಾಜೇಗೌಡರಿಗೆ ಶಾಕ್ ಆದಂತಾಗಿದೆ. ಕಾರ್ಯಕರ್ತರು ಪಕ್ಷ ತೊರೆಯುವುದಕ್ಕೆ ಅವರ ನಡವಳಿಕೆಯೇ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಮಾಜಿ ಸಚಿವ ಜೀವರಾಜ್, ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಆಹ್ವಾನ ಮಾಡಿಕೊಂಡಿದ್ದಾರೆ.