ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಮೊದಲು ಜೆಡಿಎಸ್ ನಲ್ಲಿಯೇ ಇದ್ದು ಬಂದವರು. ಇದೀಗ ಕಾಂಗ್ರೆಸ್ ನಲ್ಲಿ ನೆಲೆಯೂರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಬಳಿಕ ಶಾಸಕರ ನಡೆಯಿಂದಾಗಿ ಮೈತ್ರಿ ಸರ್ಕಾರ ಬಿದ್ದು ಹೋಗಿತ್ತು. ಬಳಿಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಯಾವಾಗಲೂ ಆರೋಪ ಪ್ರತ್ಯಾರೋಪ ಮಾಡುತ್ತಾ ಇರುತ್ತಾರೆ. ಆದ್ರೆ ಸಿದ್ದರಾಮಯ್ಯ ಜೊತೆಗೆ ರೇವಣ್ಣ ಅವರ ಸ್ನೇಹ ತುಂಬಾ ಚೆನ್ನಾಗಿದೆ ಎಂಬುದನ್ನು ಮಾಜಿ ಸಚಿವ ರೇವಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ರೇವಣ್ಣ ಅವರು, ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿದೆ. ಮುಂದೆಯೂ ಕೂಡ ಇದೇ ರೀತಿ ಇರುತ್ತೀವಿ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರು ಇನ್ನು ತಾವೂ ಸ್ಪರ್ಧೆ ಮಾಡುವ ಕ್ಷೇತ್ರವನ್ನು ಗುರುತಿಸಿಲ್ಲ. ಆ ಬಗ್ಗೆ ಮಾತನಾಡಿದ ರೇವಣ್ಣ ಅವರು, ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮತದಾರರ ಪಟ್ಟಿ ಡಿಲೀಟ್ ವಿಚಾರವಾಗಿ ಮಾತನಾಡಿದ್ದು, ಈ ವಿಚಾರವನ್ನು ಗಂಭೀರವಾಗಿ ಜಿಲ್ಲಾಧಿಕಾರಿಗಳು ಪರಿಗಣಿಸಬೇಕು. ಉದ್ದೇಶ ಪೂರ್ವಕವಾಗಿಯೇ ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿಯೂ ಏಜೆಂಟರ ಮೂಲಕ ಮತದಾರರ ಪಟ್ಟಿ ತಯಾರಾಗಿದೆ ಎಂದಿದ್ದಾರೆ.