ಹಾನಗಲ್: ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಜನರ ಹಿತಕಾಯಲು ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆ ವಿಚಾರವಾಗಿ ಏನಾದರೂ ಮನವಿ ಪತ್ರ ನೀಡಿದ್ದಾರಾ? ಹಾಗಾದ್ರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸಾಧನೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಪ್ರಶ್ನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ನಿಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಧ್ವನಿ ಅಡಗಿಸಿದ್ದೀರಿ. ಮೊನ್ನೆ ಬಿಜೆಪಿ ಶಾಸಕ ರಾಯಚೂರಿನ ಭಾಗವನ್ನು ತೆಲಂಗಾಣಕ್ಕೆ ಸೇರಿಸಬೇಕು ಅಂದಿದ್ದಾರೆ. ಬಿಜೆಪಿಯ ಮತ್ತೊಬ್ಬ ಮಂತ್ರಿ ಹಿಂದೆ ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳಿದ್ದರು. ಆದರೂ ಬಿಜೆಪಿಯವರು ಅಖಂಡ ಕರ್ನಾಟಕದ ಬಗ್ಗೆ ಮಾತನಾಡಿಲ್ಲ. ಈ ರೀತಿ ಮಾತನಾಡುತ್ತಿರುವುದು ತಪ್ಪು ಎಂದು ಮುಖ್ಯಮಂತ್ರಿಗಳೂ ಹೇಳುತ್ತಿಲ್ಲ ಎಂದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದರು. ಯಾರಿಗಾದರೂ ಸರ್ಕಾರಿ ಕೆಲಸ ಅಲ್ಲ ಖಾಸಗಿ ಕೆಲಸ ಸಿಕ್ಕಿತಾ? ಯುವಕರು ತಮ್ಮ ಪದವಿ ಪ್ರಮಾಣಪತ್ರವನ್ನು ಬೊಮ್ಮಾಯಿ ಅವರಿಗೆ ಕಳುಹಿಸಿ ಕೊಡಿ. ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡುವುದಿರಲಿ, ಇದ್ದ 4 ಕೋಟಿ ಕೆಲಸ ಕೂಡ ನಾಶವಾಗಿದೆ. ಇನ್ಯಾವ ಕಾರಣಕ್ಕೆ ನೀವು ಅವರಿಗೆ ಮತ ಹಾಕಬೇಕು. ಇಲ್ಲಿ ಕೇವಲ ಶ್ರೀನಿವಾಸ ಮಾನೆ ಮಾತ್ರ ಅಭ್ಯರ್ಥಿಯಲ್ಲ. ಇಲ್ಲಿರುವ ಪ್ರತಿಯೊಬ್ಬ ಮತದಾರನೂ ಅಭ್ಯರ್ಥಿಯೇ. ಕೇವಲ ನೀವು ಮಾತ್ರ ಮಾನೆ ಅವರಿಗೆ ಮತ ಹಾಕಿದರೆ ಸಾಲದು. ನಿಮ್ಮ ಜತೆ ಇನ್ನೂ ಐದು ಜನ ಮತಹಾಕುವಂತೆ ಮಾಡಬೇಕು. ಆಗ ಮಾನೆ ಅವರು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ಸಾಧ್ಯ.
ಬಿಜೆಪಿ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ? ಬಡವರಿಗೆ, ರೈತರಿಗೆ ಸಹಾಯ ಮಾಡಲು ಆಗಲಿಲ್ಲ. ಉದ್ಯೋಗ ನೀಡಲಿಲ್ಲ. ಆದರೂ ಅಚ್ಛೇದಿನ್ ಬಂತು ಅಂತಾರೆ? ಯಾರಿಗೆ ಬಂತು ಅಚ್ಛೇ ದಿನ? ನಿಮಗೇನಾದರೂ ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ ಹಣ ಬಂತಾ? ಖಾತೆಗೆ ಹಣ ಹಾಕುತ್ತೇವೆ ಎಂದರಲ್ಲ ಎಲ್ಲಿ ಅಂತಾ ಬೊಮ್ಮಾಯಿ ಅವರನ್ನು ಕೇಳಬೇಕು. ಈ ರೀತಿ ಕೇಳಲು ಇದೇ 30ರಂದು ನಿಮಗೆ ಅವಕಾಶ, ಅಧಿಕಾರ ಕೊಟ್ಟಿದ್ದಾರೆ.
ಈ ಚುನಾವಣೆಯನ್ನು ಇಡೀ ರಾಷ್ಟ್ರ ನೋಡುತ್ತಿದೆ. ಇತ್ತೀಚೆಗೆ ನಡೆದ ಮಸ್ಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 31 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಎಲ್ಲರೂ ಇದನ್ನು ಮೆಚ್ಚಿದರು. ಬೆಳಗಾವಿಯಲ್ಲಿ ಸ್ವಲ್ಪ ಅಂತರದಲ್ಲಿ ಸೋತೆವು. ಹೀಗಾಗಿ ನಮಗೆ ಒಂದೊಂದು ವೋಟೂ ಮುಖ್ಯ. ನಿಮ್ಮ ಪರಿಸ್ಥಿತಿ, ನಿಮ್ಮ ಬ್ಯಾಂಕ್ ಖಾತೆಯನ್ನು ನೋಡಿ ನಿರ್ಧಾರ ಮಾಡಿ. ನೀವು ಮಾತ್ರವಲ್ಲ, ನಿಮ್ಮ ಜತೆ ಇನ್ನು ಐದು ಜನ ಹಸ್ತದ ಗುರುತಿಗೆ ಮತ ಹಾಕುವಂತೆ ಮಾಡಿ. ನೀವು ಮತಯಂತ್ರದಲ್ಲಿ ಮತ ಚಲಾಯಿಸಿದಾಗ ಬರುವ ಶಬ್ಧ ಮೋದಿ ಹಾಗೂ ಬೊಮ್ಮಾಯಿ ಅವರಿಗೆ ಕೇಳಬೇಕು. ಆ ರೀತಿ ನೀವು ಮತದಾನ ಮಾಡಬೇಕು ಎಂದರು.