ರಾಹುಲ್ ಗಾಂಧಿ ಸದ್ಯ ಭಾರತಾದ್ಯಂತ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಸದ್ಯಕ್ಕೆ ಭಾರತ್ ಜೋಡೋ ಯಾತ್ರೆ ಕೇರಳದಲ್ಲಿದೆ. ಆದರೆ ಕೇರಳದಲ್ಲಿ ಹೊರಡಿಸಿದಂತ ಬ್ಯಾನರ್ ಈಗ ಕಾಂಗ್ರೆಸ್ ಮುಜುಗರವನ್ನುಂಟು ಮಾಡಿದೆ. ಭಾರತ್ ಜೋಡೋ ಯಾತ್ರೆ ಬ್ಯಾನರ್ ನಲ್ಲಿ ವೀರ ಸಾವರ್ಕರ್ ಫೋಟೋ ಕೂಡ ಪ್ರಿಂಟ್ ಆಗಿದೆ.
ಈ ಫೋಟೋವನ್ನು ಕೇರಳದ ಶಾಸಕ ಪಿ ವಿ ಅನ್ವರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದನ್ನು ಈಗ ಸರಿ ಮಾಡಲಾಗಿದೆ. ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್, ಸಾವರ್ಕರ್ ಇದ್ದ ಜಾಗಕ್ಕೆ ಗಾಂಧಿಜಿ ಫೋಟೋ ಹಾಕಿ ಸರಿ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಬ್ರಿಟಿಷರ ಬಳಿ ಕ್ಷಮೆಯಾಚಿಸಿ ಬಂದವರು ಎಂದೇ ಪ್ರತಿಪಾದಿಸುತ್ತಿದೆ. ಹೀಗಿರುವಾಗ ಭಾರತ್ ಜೋಡೋ ಯಾತ್ರೆಯಲ್ಲಿ, ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಫೋಟೋ ಕಂಡು ಮುಜುಗರಕ್ಕೊಳಗಾಗಿದೆ.