ಬೆಂಗಳೂರು: 2023ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ವಿರೋಧ ಪಕ್ಷದ ಪ್ರಬಲ ನಾಯಕರಿಗೂ ಗಾಳ ಹಾಕುವುದಕ್ಕೆ ಶುರು ಮಾಡಿದ್ದಾರೆ. ಹಾಗೇ ತಮ್ಮದೇ ಪಕ್ಷದ ಗೆಲುವಿಗೆ ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ನಾಯಕರಿಗೆ ಗಾಳ ಹಾಕುವುದಕ್ಕೆ ಆರಂಭಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆ ಸಚಿವ ವಿ ಸೋಮಣ್ಣ ಅವರನ್ನು ಸೆಳೆಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.
ವಿ ಸೋಮಣ್ಣ ಸದ್ಯಕ್ಕೆ ಬಿಜೆಪಿಯಲ್ಲಿ ಮುನಿಸು ಇಟ್ಟುಕೊಂಡಿದ್ದಾರೆ. ಈ ಮುನಿಸನ್ನೇ ಬಂಡವಾಳ ಮಾಡಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಹೊರಟಿದ್ದಾರೆ ಎನ್ನಲಾಗುತ್ತಿದ್ದು, ಅದು ಎಷ್ಟರ ಮಟ್ಟಿಗೆ ಲಾಭವಾಗುತ್ತೆ ಎಂಬ ಕುತೂಹಲವಿದೆ. ವಿ ಸೋಮಣ್ಣ ಕಾಂಗ್ರೆಸ್ ಗೆ ಬಂದರೆ ಲಿಂಗಾಯತರ ಮತಗಳನ್ನು ಒಗ್ಗೂಡಿಸಬಹುದಾಗಿದೆ. ಈಗಾಗಲೇ ಹಲವು ಲಿಂಗಾಯತ ಪ್ರಮುಖ ಮುಖಂಡರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದು, ನಮ್ಮವರಿಗೆ ಹೆಚ್ಚು ಟಿಕೆಟ್ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈಗ ಸೋಮಣ್ಣ ಅವರನ್ನು ಕರೆತರುವುದರಿಂದ ಲಿಂಗಾಯತ ಮತಗಳ ಒಗ್ಗೂಡುವಿಕೆ ಜಾಸ್ತಿಯಾಗಲಿದೆ.
ಸೋಮಣ್ಣ ಅವರಿಗೆ ಮೈಸೂರು ಜಿಲ್ಕಾ ಉಸ್ತುವಾರಿ ಕೈ ತಪ್ಪಿದ್ದು ಇನ್ನು ಬೇಸರವಿದೆ. ಆ ಬೇಸರವನ್ನು ಯಡಿಯೂರಪ್ಪ ಅವರ ಮೇಲೆ ತೋರಿಸುತ್ತಲೆ ಇದ್ದಾರೆ. ಅಷ್ಟೇ ಅಲ್ಲ ಚಾಮರಾಜನಗರ ಉಸ್ತುವಾರಿ ಪಡೆಯುವುದಕ್ಕೆ ಸಾಕಷ್ಟು ಪ್ರಯತ್ನಪಟ್ಟರು ಸಾಧ್ಯವಾಗಿಲ್ಲ. ಇನ್ನು ಬಿಜೆಪಿ ಕೋರ್ ಕಮಿಟಿಯಲ್ಲೂ ಸ್ಥಾನ ಸಿಕ್ಕಿಲ್ಲ ಎಂಬೆಲ್ಲಾ ಬೇಸರ ಸೋಮಣ್ಣ ಅವರಿಗೆ ಇದೆ.