Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಕಾಂಗ್ರೆಸ್ ನೇತ್ರತ್ವದ ಇಂಡಿಯಾವನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ : ಸಂವಾದ ಕಾರ್ಯಕ್ರಮದಲ್ಲಿ ಕಾಮ್ರೇಡ್ ಕೆ.ರಾಧಾಕೃಷ್ಣ ಹೇಳಿಕೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : “ದೇಶದಾದ್ಯಂತ ಇಂದು ಎರಡು ಒಕ್ಕೂಟಗಳು ಜನರ ಮುಂದಿವೆ. ಒಂದು ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಇನ್ನೊಂದು ಕಾಂಗ್ರೆಸ್ ನೇತ್ರತ್ವ ಇಂಡಿಯಾ. ಇವೆರಡನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ ಎಂದು ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷದ ಪಾಲಿಟ್‍ಬ್ಯೂರೋ ಸದಸ್ಯರಾಗಿರುವ ಹಾಗೂ ದಕ್ಷಿಣ ರಾಜ್ಯಗಳ ಉಸ್ತುವಾರಿಯೂ ಆಗಿರುವ ಕಾಮ್ರೇಡ್ ಕೆ.ರಾಧಾಕೃಷ್ಣ ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸುಜಾತ. ಡಿ ಇವರ ಚುನಾವಣಾ ಪ್ರಚಾರದ ಅಂಗವಾಗಿ ಚಿತ್ರದುರ್ಗಕ್ಕೆ ಇಂದು ಭೇಟಿ ನೀಡಿದ ಅವರು ಪಕ್ಷದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ‘ಮಾಧ್ಯಮ ಪ್ರತಿನಿಧಿಗಳ ಜೊತೆಯಲ್ಲೊಂದು ಸಂವಾದ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಪಕ್ಷಗಳು ಅಧಿಕಾರದಲ್ಲಿ ಇರುವಾಗ ಜನತೆಗೆ ದ್ರೋಹ ಬಗೆದಿವೆ. ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಿಸುತ್ತೇವೆ ಎಂದು ಕಳೆದ ಹತ್ತು ವರ್ಷದಿಂದ ಈಚೆಗೆ ಭಾರಿ ಭರವಸೆಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಬಡವರ ಪಾಲಿಗೆ ಅಚ್ಚೆದಿನ್, ಕಪ್ಪು ಹಣವನ್ನು ವಾಪಸ್ ತಂದು ಹಂಚುವುದು, ಭೇಟಿ ಬಚಾವೋ ಭೇಟಿ ಪಡಾವೋ, ಇವೇ ಮೊದಲಾದ ಆಶ್ವಾಸನೆಗಳನ್ನು ನೀಡಿತ್ತು. ಆದರೆ ಅವೆಲ್ಲವನ್ನು ಹುಸಿಗೊಳಿಸಿದೆ. ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದೆ.

ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಮಾಡಿದ ಹಗರಣಗಳನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಿ ಮುಗಿಸಿದೆ. ಈಗ ಇದಕ್ಕೆ ಪರ್ಯಾಯವಾಗಿ ಕೆಲವು ಪಕ್ಷಗಳು ಸೇರಿ ಕಾಂಗ್ರೆಸ್ ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟ ರಚಿಸಿಕೊಂಡಿವೆ. ಇನ್ನು ಸಿಪಿಐ ಸಿಪಿಐಎಂ ನಂತಹ ಎಡಪಕ್ಷಗಳು ಕೆಲ ಪ್ರಾದೇಶಿಕ ಪಕ್ಷಗಳು ಇಂಡಿಯಾ ಒಕ್ಕೂಟದ ಬೆಂಬಲಕ್ಕೆ ನಿಂತಿವೆ. ಆದರೆ ಇದು ಜನತೆಗೆ ನಿಜವಾದ ಪರ್ಯಾಯವಲ್ಲ. ಬಂಡವಾಳಶಾಹಿಗಳ ಪರ್ಯಾಯ ಆಯ್ಕೆ ಅಷ್ಟೇ.
ಈ ಎರಡು ದೊಡ್ಡ ಪಕ್ಷಗಳು ಜಾರಿಗೊಳಿಸುವ ಮತ್ತು ಅನುಸರಿಸುವ ನೀತಿಗಳು ಒಂದೇ ಆಗಿವೆ.

ಅಲ್ಲದೆ ಅವುಗಳ ಒಕ್ಕೂಟದಲ್ಲಿರುವ ಮಿತ್ರ ಪಕ್ಷಗಳು ಅದೇ ನೀತಿಗಳನ್ನು ಅನುಸರಿಸುತ್ತಿವೆ. ಆದ್ದರಿಂದ ಜ್ವಲಂತ ಸಮಸ್ಯೆಗಳ ವಿರುದ್ಧ ಬಲಿಷ್ಠ ಜನಾಂದೋಲನ ಕಟ್ಟುವ ಮೂಲಕ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಿಕೊಳ್ಳಲು ಜನಗಳಿಗೆ ನಾವು ಕರೆ ನೀಡುತ್ತೇವೆ. ಆದ್ದರಿಂದ ಇಂದು ನೈಜ ಜನಪರ ಹೋರಾಟಗಳನ್ನು ಬೆಳೆಸುತ್ತಿರುವ ನಮ್ಮ ಪಕ್ಷ ಏಕಾಂಗಿಯಾಗಿ ದೇಶದ 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಂಸತ್ತಿನಲ್ಲಿ ಜನಪರ ಹೋರಾಟದ ಧ್ವನಿಯೆತ್ತಲು ಜನತೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.

 

ಜಾಗತಿಕವಾಗಿ ಬಲಪಂಥೀಯರು ಮೇಲುಗೈ ಸಾಧಿಸುತ್ತಿರುವಾಗ, ಭಾರತದಲ್ಲಿಯೂ ಮೋದಿ ಸರ್ಕಾರ ಅಘೋಷಿತವಾಗಿ ತುರ್ತುಪರಿಸ್ಥಿತಿಯನ್ನು ಹೇರುತ್ತಿರುವಾಗ, ನಾವು ಜನರಿಗೆ ಪರ್ಯಾಯ ಕೊಡುವ ನಿಟ್ಟಿನಲ್ಲಿ ಉಳಿದ ಪ್ರಗತಿಪರರೊಂದಿಗೆ ಒಂದಾಗುವುದು ಸರಿಯೋ ಅಥವಾ ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸುವುದು ಸರಿಯೋ?

ಇಂದು ಕೇವಲ ಬಿಜೆಪಿ ಪಕ್ಷ ದೇಶದ ಮೇಲೆ ಫ್ಯಾಸೀವಾದವನ್ನು ಹೇರುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ ಕೂಡ ಈ ಪ್ರಯತ್ನ ನಡೆಸಿದೆ. ಬಂಡವಾಳಶಾಹಿಗಳ ಹಿತ ಕಾಯಲು ಈ ಎಲ್ಲಾ ಬಂಡವಾಳಶಾಹಿ ಪರವಾದಂತಹ ಪಕ್ಷಗಳು ಫ್ಯಾಸೀವಾದಿ ಕ್ರಮಗಳನ್ನು ಜನರ ಮೇಲೆ ಹೇರಿವೆ. ಆದ್ದರಿಂದ ನಮಗೆ ಐಕ್ಯರಂಗ ಬೇಕಿರುವುದು ಹೋರಾಟಕ್ಕಾಗಿಯೇ ಹೊರತು ಕೇವಲ ಚುನಾವಣೆಯನ್ನು ಎದುರಿಸಲು ಅಲ್ಲ. ಇಂದು ಇಂಡಿಯಾದ ನೇತೃತ್ವ ವಹಿಸಿರುವ ಕಾಂಗ್ರೆಸ್ ಕೂಡ ತುರ್ತು ಪರಿಸ್ಥಿತಿಯನ್ನು ಹೇರಿ ಫ್ಯಾಸಿಸ್ಟ್ ಆಳ್ವಿಕೆಯನ್ನು ನಡೆಸಿತ್ತು. ಹಾಗಾಗಿ ಬಂಡವಾಳಗಾರರ ಸೇವೆಗೈಯುವ ಸಲುವಾಗಿ ರಚನೆಯಾಗುವ ಐಕ್ಯರಂಗ ನಮಗೆ ಬೇಕಿಲ್ಲ. ಜನಗಳ ಸಮಸ್ಯೆಯನ್ನು ಹೋರಾಡಲು ಒಂದು ಹೋರಾಟದ ಐಕ್ಯರಂಗ ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲಾ ಎಡ ಪಕ್ಷಗಳಿಗೆ ಮತ್ತು ನಾಡಿನ ಎಲ್ಲಾ ಹೋರಾಟ ನಿರತ ಸಂಘಟನೆಗಳಿಗೆ ನಾವು ಕರೆ ನೀಡುತ್ತೇವೆ. ಇಲ್ಲವಾದಲ್ಲಿ ಚುನಾವಣೆಗಾಗಿ ಮಾತ್ರವೇ ಐಕ್ಯರಂಗ ರಚಿಸಿಕೊಳ್ಳುವುದು ಅವಕಾಶವಾದವಾಗುತ್ತದೆ.

ಮೋದಿಗೆ ಪರ್ಯಾಯವಾಗಿ ನೀವು ಯಾರನ್ನು ಬೆಂಬಲಿಸುತ್ತೀರಿ?

ಮೋದಿ ನೇತೃತ್ವದ ಎನ್‍ಡಿಎಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಯಾವ ರೀತಿಯಿಂದಲೂ ಪರ್ಯಾಯವಾಗಲು ಸಾಧ್ಯವಿಲ್ಲ. ತಮ್ಮ ತಮ್ಮ ಆಡಳಿತ ಅವಧಿಯಲ್ಲಿ ಈ ಎಲ್ಲಾ ಪಕ್ಷಗಳು ಸಹ ಫ್ಯಾಸಿಸ್ಟ್ ಆಳ್ವಿಕೆಯನ್ನು ನಡೆಸಿದವರೇ ಆಗಿದ್ದಾರೆ. ಆದ್ದರಿಂದ ನಮ್ಮ ಕರೆ ಎನ್‍ಡಿಎ ಒಕ್ಕೂಟವನ್ನು ಖಂಡಿತ ಸೋಲಿಸಬೇಕು. ಆದರೆ ಅದಕ್ಕೆ ಪರ್ಯಾಯವಾಗಿ ಇಂಡಿಯಾ ಒಕ್ಕೂಟವನ್ನು ಗೆಲ್ಲಿಸಬೇಕಿಲ್ಲ. ಏಕೆಂದರೆ ಇವರು ಅನುಸರಿಸುತ್ತಿರುವ ನೀತಿಗಳು ಒಂದೇ ಆಗಿವೆ . ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‍ಇಪಿ2020 ಇಂದ ಹಿಡಿದು ಎಲ್ಲಾ ಕಾರ್ಮಿಕ ಸಂಹಿತೆಗಳು, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಉತ್ಸುಕರಾಗಿದ್ದಾರೆ. ಆದ್ದರಿಂದ ಯಾರು ನಿಜವಾಗಿಯೂ ಜನಪರವಾದ ಹೋರಾಟಗಳನ್ನು ಬೆಳೆಸುತ್ತಿದ್ದಾರೆಯೋ ಅವರನ್ನು ಗೆಲ್ಲಿಸಿ. ಅಂತಹ ಹೋರಾಟನಿರತ ಪಕ್ಷವಾಗಿರುವ ಎಸ್‍ಯುಸಿಐ(ಕಮ್ಯುನಿಸ್ಟ್)ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳುತ್ತೇವೆ. ಎಲ್ಲಿ ನಾವು ಸ್ಪರ್ಧಿಸುತ್ತಿಲ್ಲವೋ ಅಲ್ಲಿ ಹೋರಾಟಗಳಿಂದ ಹೊರಹೊಮ್ಮಿದ ಅಭ್ಯರ್ಥಿಯನ್ನು ಗೆಲ್ಲಿಸಿ. ಹೋರಾಟದಿಂದ ಹೊರಹೊಮ್ಮಿದವರು ಅಲ್ಲಿ ಇಲ್ಲವಾದಲ್ಲಿ ಕಡೆಯ ಪಕ್ಷ ಇರುವವರಲ್ಲೇ ಪ್ರಾಮಾಣಿಕರನ್ನು ಗೆಲ್ಲಿಸಿ ಎಂದು ಕರೆ ನೀಡುತ್ತೇವೆ.

ಎನ್‍ಡಿಎ ಮತ್ತು ಇಂಡಿಯಾ ಒಕ್ಕೂಟಗಳಿಗೆ ಸಮನಾಗಿ ಎಸ್‍ಯುಸಿಐ (ಕಮ್ಯುನಿಸ್ಟ್) ಜನಪ್ರಿಯವಾಗಿಲ್ಲ. ಹಾಗಿದ್ದ ಮೇಲೆ ಚುನಾವಣೆಯನ್ನು ನೀವು ಹೇಗೆ ಎದುರಿಸುತ್ತೀರಿ?

ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸಿಕ್ಕಷ್ಟು ಮಾಧ್ಯಮಗಳ ಬೆಂಬಲ ನಮಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೆ ನಾವು ಸಹ ಎಲ್ಲಾ ಜನರನ್ನು ತಲುಪಲು ಸಾಧ್ಯ. ಆದಾಗ್ಯೂ ರಾಜ್ಯದ 19 ಕ್ಷೇತ್ರಗಳಲ್ಲಿ ಮತ್ತು ಇಡೀ ದೇಶದ 19 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಒಟ್ಟು 151 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಅವರನ್ನು ಗೆಲ್ಲಿಸುವುದು ಜನಗಳ ಮುಂದಿರುವ ಪ್ರಶ್ನೆ. ನಮ್ಮದು ಕೇವಲ ಪಾರ್ಲಿಮೆಂಟರಿ ರಾಜಕಾರಣ ಮಾಡುವ ಪಕ್ಷವಲ್ಲ. ಜನಪರ ಹೋರಾಟಗಳನ್ನು ಕಟ್ಟುವ ಪಕ್ಷ. ವಿದ್ಯಾರ್ಥಿ ಯುವಜನ ಮಹಿಳೆಯರು ಕಾರ್ಮಿಕರು ರೈತರ ಸಮಸ್ಯೆಗಳನ್ನು ತೆಗೆದುಕೊಂಡು ನಮ್ಮ ಪಕ್ಷ ಮತ್ತು ಮುಂದಳಗಳು ಸದಾ ಹೋರಾಟಗಳನ್ನು ನಡೆಸುತ್ತಿವೆ. ಹೋರಾಟದ ಗತಿಯಲ್ಲಿ ಚುನಾವಣೆ ಎದುರಾದಾಗ ಅದನ್ನು ಸಹ ಹೋರಾಟದ ಭಾಗವೆಂದು ಪರಿಗಣಿಸಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ನಿಜವಾದ ಜನ ಹೋರಾಟಗಳು ಬೆಳೆಯಬೇಕೆಂದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ. ನಮ್ಮ ಮನವಿಯನ್ನು ಜನತೆಗೆ ತಲುಪಿಸುವ ಹೊಣೆ ನಿಮ್ಮದು. ಅಲ್ಲದೆ ಇತಿಹಾಸದ ಪಾಠವೆಂದರೆ ನಾವು ಅನುಸರಿಸುತ್ತಿರುವ ಮಾರ್ಗ ಸರಿಯಾಗಿದ್ದರೆ, ಸತ್ಯ ಮತ್ತು ನ್ಯಾಯಸಮ್ಮತವಾಗಿದ್ದರೆ ಇಂದಲ್ಲ ನಾಳೆ ಗೆಲುವು ನಮ್ಮದೇ. ಈ ನಂಬಿಕೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ.

ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಎನ್.ಡಿ.ಎ ಒಕ್ಕೂಟವನ್ನು ಸೋಲಿಸುವುದು ಹೇಗೆ ಸಾಧ್ಯ?

ಎನ್‍ಡಿಎ ಒಕ್ಕೂಟವನ್ನು ನಮ್ಮೊಬ್ಬರಿಂದಲೇ ಸೋಲಿಸಲು ಸಾಧ್ಯವಿಲ್ಲ. ಆದರೆ ನಾವು ಜನಗಳಿಗೆ ಮನವಿ ಮಾಡುವುದೇನೆಂದರೆ ನಮ್ಮ ಅಭ್ಯರ್ಥಿಗಳು ಇರುವೆಡೆ ಅವರನ್ನು ಗೆಲ್ಲಿಸಿ, ಇಲ್ಲದಿರುವ ಕಡೆ ಹೋರಾಟ ನಿರತ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂಬುದಾಗಿದೆ. ಆಗ ಎನ್.ಡಿ.ಎ ಒಕ್ಕೂಟವನ್ನು ಸೋಲಿಸಲು ಸಾಧ್ಯ.

ಎನ್‍ಡಿಎ ಒಕ್ಕೂಟವನ್ನು ಸೋಲಿಸಬೇಕೆಂದು ಹೇಳುವ ನೀವು ಮತ್ತು ಇತರ ಎಲ್ಲಾ ಎಡ ಪಕ್ಷಗಳು ಒಕ್ಕೂಟ ರಚಿಸಿಕೊಳ್ಳದೆ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಮತಗಳು ಚದುರುವುದಿಲ್ಲವೇ?

ನಮಗೆ ಒಕ್ಕೂಟ ಬೇಕು. ಆದರೆ ಅದು ಹೋರಾಟದ ಉದ್ದೇಶದಿಂದ ಆಗಬೇಕು. ಕೇವಲ ಚುನಾವಣೆಗೋಸ್ಕರ ಒಕ್ಕೂಟ ರಚಿಸಿಕೊಳ್ಳುವುದಲ್ಲ. ಜನಗಳ ಸಮಸ್ಯೆಗಳ ವಿರುದ್ಧ ಹೋರಾಡಲು ಒಕ್ಕೂಟರಂಗದ ಅವಶ್ಯಕತೆ ಇದೆ. ಕಡೆ ಪಕ್ಷ ಎಡಪಕ್ಷಗಳಾದರೂ ಈ ಒಕ್ಕೂಟರಂಗವನ್ನು ರಚಿಸಿಕೊಳ್ಳುವ ಅವಶ್ಯಕತೆ ಇದೆ. ಮಾಕ್ರ್ಸ್‍ವಾದ, ಲೆನಿನ್‍ವಾದದಲ್ಲಿ ನಂಬಿಕೆ ಇರುವ ಪಕ್ಷಗಳಾದರೆ ಈ ಒಕ್ಕೂಟ ಹೋರಾಟಕ್ಕೆ ಕೈ ಹಾಕಬೇಕು. ಲೆನಿನ್ “ಒಕ್ಕೂಟದ ಅವಶ್ಯಕತೆ ಇರುವುದು ಜನ ಹೋರಾಟಗಳನ್ನು ಬಲಪಡಿಸಲು. ಬಲಿಷ್ಠವಾದ ಹೋರಾಟಗಳನ್ನು ಕಟ್ಟಿ ತನ್ಮೂಲಕ ಜನಗಳ ಪರ್ಯಾಯ ರಾಜಕೀಯ ಶಕ್ತಿಯನ್ನು ನಿರ್ಮಿಸಬೇಕು” ಎನ್ನುತ್ತಾರೆ. ಅವರ ವಿಚಾರದಲ್ಲಿ ನಂಬಿಕೆ ಇರುವವರು ಈ ಒಕ್ಕೂಟ ಹೋರಾಟ ರಂಗವನ್ನು ಸೇರಬೇಕು. ಬದಲಿಗೆ ಹೇಗಾದರೂ ಸರಿಯೇ ಪಾರ್ಲಿಮೆಂಟಿನಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಒಮ್ಮೆ ಕಾಂಗ್ರೆಸ್ ಜೊತೆಗೆ, ಮತ್ತೊಮ್ಮೆ ಜೆಡಿಎಸ್ ಜೊತೆಗೆ ಸೇರುವುದು ಅವಕಾಶವಾದವಲ್ಲವೇ?

ನಿಮ್ಮದು ಜನಪರ ಸಂಘಟನೆಯೇ ಅಥವಾ ರಾಜಕೀಯ ಪಕ್ಷವೇ ?

ಎರಡೂ ಹೌದು. ನಮ್ಮದು ನೈಜ ಕಾರ್ಮಿಕ ವರ್ಗದ ರಾಜಕೀಯ ಪಕ್ಷ. ಜನಪರ ಆಶಯಗಳನ್ನು ಎತ್ತಿ ಹಿಡಿಯುವ ನೈಜ ಕಮ್ಯುನಿಸ್ಟ್ ಪಕ್ಷ ನಮ್ಮದಾಗಿದೆ. ಆದರೆ ಸಿಪಿಐ, ಸಿಪಿಐ(ಎಂ)ಗಳು ಇಂದು ಹೋರಾಟದ ಮಾತುಗಳನ್ನು ನಿಲ್ಲಿಸಿ ಬಿಟ್ಟಿವೆ.

ದೇಶಾದ್ಯಂತ 151 ಕ್ಷೇತ್ರಗಳಲ್ಲಿ ನೀವು ಗೆದ್ದರೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಆಗ ಹೊಂದಾಣಿಕೆ ಮಾಡಿಕೊಳ್ಳಲೇಬೇಕಲ್ಲವೇ?

ನಾವು ಈ ಚುನಾವಣೆಯನ್ನು ಒಂದು ಹೋರಾಟದ ವೇದಿಕೆಯಾಗಿ ಪರಿಗಣಿಸುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ಜನತೆ ರಾಜಕೀಯವಾಗಿ ಎಚ್ಚರಗೊಂಡಿರುವಾಗ ವಿಚಾರಗಳನ್ನು ಕೇಳಿಸಿಕೊಳ್ಳುವ ಮನಸ್ಥಿತಿ ಹೊಂದಿರುವಾಗ ನಮ್ಮ ಹೋರಾಟದ ರಾಜಕೀಯದ ಬಗ್ಗೆ ಜನರೊಡನೆ ಚರ್ಚಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ. ನಮ್ಮದು ನೈಜ ಕ್ರಾಂತಿಕಾರಿ ಪಕ್ಷ. ಸಂಸದೀಯ ರಾಜಕಾರಣಕ್ಕೆ ನಾವು ಸೀಮಿತವಾಗಿಲ್ಲ.
ಜನಗಳಿಗೆ ಜಾತಿ, ಧರ್ಮ, ಕೋಮು ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಅವರ ನೈಜ ಸಮಸ್ಯೆಗಳಿಂದ ವಿಮುಖರಾಗುವಂತೆ ಮಾಡಿರುವ ಇಂದಿನ ರಾಜಕೀಯಕ್ಕೆ ಪರ್ಯಾಯವಾಗಿ ನೈಜ ಜನಪರ ರಾಜಕೀಯವನ್ನು ಚರ್ಚಿಸುವ ಸಲುವಾಗಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಜನತೆಗೆ ಮನವಿಯನ್ನು ಮಾಡುತ್ತೇವೆ. ಆದರೆ ಈ ಕುರಿತು ಯಾವುದೇ ಭ್ರಮೆಗಳಿಲ್ಲ. ಹೋರಾಟದ ವಿಚಾರಧಾರೆಯನ್ನು ಹರಡುವುದೇ ನಮ್ಮ ಉದ್ದೇಶ. ಚುನಾವಣೆಯ ನಂತರವೂ ಈ ನಮ್ಮ ಕಾರ್ಯ ಮುಂದುವರಿಯುತ್ತದೆ.

ನೀವೇ ಬಹುಮತ ಪಡೆದು ಗೆದ್ದು ಬಂದರೆ ದೇಶಕ್ಕೆ ನಿಮ್ಮ ಕೊಡುಗೆ ಏನು?

ಈ ಸಂಸದೀಯ ವ್ಯವಸ್ಥೆಯು ಬಂಡವಾಳಿಗರ ಸೇವೆ ಮಾಡಲು ಹುಟ್ಟಿಕೊಂಡ ವ್ಯವಸ್ಥೆಯಾಗಿದೆ. ಸಂಪೂರ್ಣ ಸಮಾಜದ ಮೂಲಭೂತ ಬದಲಾವಣೆಗೆ ಸಮಾಜವಾದಿ ಕ್ರಾಂತಿ ಅನಿವಾರ್ಯ. ಅಲ್ಲಿಯವರಗೂ ಈ ವ್ಯವಸ್ಥೆಯಲ್ಲೇ ನಾವು ಗೆದ್ದು ಬಂದರೆ ಈ ಸಂಸತ್ತಿನ ಚೌಕಟ್ಟಿನೊಳಗೆ ಜನಪರವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಾರ್ಮಿಕ ಕಾನೂನುಗಳನ್ನು ಬಲಪಡಿಸುವುದು, ಖಾಸಗೀಕರಣವನ್ನು ಸಂಪೂರ್ಣವಾಗಿ ರದ್ದು ಮಾಡುವುದು, ನೈಜ ಜನಪರ ಕಾನೂನುಗಳನ್ನು ಜಾರಿಗೊಳಿಸುವುದು, ಶಿಕ್ಷಣ ಮತ್ತು ಆರೋಗ್ಯವನ್ನು ಸಂಪೂರ್ಣ ಉಚಿತವಾಗಿ ನೀಡುವುದು, ಶಿಕ್ಷಣವನ್ನು ಚಾರಿತ್ಯ ನಿರ್ಮಾಣದ ಸಾಧನವನ್ನಾಗಿ ಮಾರ್ಪಡಿಸುವುದು, ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಅಳವಡಿಸುವುದು ಇವೇ ಮೊದಲಾದ ಸುಧಾರಣೆಗಳನ್ನು ಕ್ರಾಂತಿಗೆ ಪೂರಕವಾಗಿ ತರುತ್ತೇವೆ.

ಬೇರೆ ಯಾವುದೇ ಪಕ್ಷಗಳೊಂದಿಗೆ ನಿಮಗೆ ಹೊಂದಾಣಿಕೆ ಇದೆಯೇ?

ಯಾವುದೇ ಪಕ್ಷಗಳೊಂದಿಗೆ ಹೊಂದಾಡಿಕೆ ಇಲ್ಲ. ಸಿಪಿಐ ಸಿಪಿಎಂ ಪಕ್ಷಗಳಿಗೆ ಕರೆ ನೀಡಿದ್ದೇವೆ. ಅವರು ಹೋರಾಟಗಳಿಗೆ ನಮ್ಮ ಜೊತೆ ಇರುತ್ತಾರೆ. ಆದರೆ ಚುನಾವಣೆ ಬಂದೊಡನೆ ಕಾಂಗ್ರೆಸ್ ಅಥವಾ ಜೆಡಿಎಸ್ ಜೊತೆ ಹೋಗುತ್ತಾರೆ. ಈಗ ನಾವು ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ.

ಎಡ ಪಕ್ಷಗಳು ಜನಸಮೂಹದ ಮೇಲೆ ತಮ್ಮ ಹಿಡಿತ ಕಳೆದುಕೊಳ್ಳುತ್ತಿವೆ ಏಕೆ ?

ಸಮಾಜವಾದ ಉತ್ತುಂಗದಲ್ಲಿದ್ದಂತಹ ಸಂದರ್ಭದಲ್ಲಿ ದೇಶದಾದ್ಯಂತ ಎಡ ಪಕ್ಷಗಳಿಗೆ ಇದ್ದಂತಹ ಜನಪ್ರಿಯತೆಯು ಈಗ ಕಡಿಮೆಯಾಗಿದೆ. ಇಲ್ಲಿ ಕಮ್ಯುನಿಸ್ಟ್ ಪಕ್ಷಗಳು ಎಂದು ಕರೆದುಕೊಂಡ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಎಂದೂ ನೈಜ ಕಮ್ಯುನಿಸ್ಟ್ ಆಗಲಿಲ್ಲ. ಅಲ್ಲದೇ ಇತಿಹಾಸದಲ್ಲಿ ತೆಗೆದುಕೊಂಡಂತಹ ತಪ್ಪು ನಿರ್ಣಯಗಳಿಂದಾಗಿ ಜನಮಾನಸದಿಂದ ದೂರ ಉಳಿದಿದ್ದಾರೆ. ಸಿಪಿಐ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲ. ಇನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಿಪಿಐ ಇಂದಿರಾ ಗಾಂಧಿಯವರನ್ನು ಬೆಂಬಲಿಸಿತು. ಸಿಪಿಎಂ ಜೆಪಿ ಚಳುವಳಿಯಲ್ಲಿ ಜನಸಂಘ ಸೇರ್ಪಡೆಯಾಗಿದೆ ಎಂಬ ಕಾರಣಕ್ಕೆ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ಅದಲ್ಲದೆ 1991ರಲ್ಲಿ ಸಮಾಜವಾದಿ ಒಕ್ಕೂಟದ ಪತನ, 2003ರಲ್ಲಿ ಚೀನಾ ಸಮಾಜದ ಪತನವು ಜನರಲ್ಲಿ ಎಡಪಕ್ಷಗಳ ಬಗ್ಗೆ ಇದ್ದ ಭರವಸೆಯನ್ನು ಕಡಿಮೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸಿಪಿಐ ಸಿಪಿಐ(ಎಂ) ಪಕ್ಷಗಳಿಗೂ ಸಹ ಹಿನ್ನಡೆಯಾಗಿರುವುದು ಸಹಜವೇ. ಆದರೆ ಜಾಗತಿಕವಾಗಿ ಈ ತಾತ್ಕಾಲಿಕ ಹಿನ್ನಡೆಯಿಂದ ನಾವು ವಿಚಲಿತರಾಗಿಲ್ಲ. ನಮ್ಮ ಪಕ್ಷದ ಸಂಸ್ಥಾಪಕರು ಈ ಯುಗದ ಓರ್ವ ಮಹಾನ್ ಮಾಕ್ರ್ಸ್‍ವಾದಿ ಚಿಂತಕರಾದ ಶಿವದಾಸ್ ಘೊಷರ ಅವರ ಪ್ರಖರ ಮತ್ತು ಸ್ಪಷ್ಟ ವಿಚಾರಧಾರೆಯೊಂದಿಗೆ ನಮ್ಮ ಪಕ್ಷ ದೇಶದಾದ್ಯಂತ ವಿಸ್ತರಣೆಯಾಗುತ್ತಿದೆ. ಬಂಡವಾಳಶಾಹಿ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಮತ್ತೆ ಕಾರ್ಮಿಕ ವರ್ಗದ ಹೋರಾಟಕ್ಕೆ ಕಾಲ ಪಕ್ವವಾಗುತ್ತಿದೆ. ಭವಿಷ್ಯದಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಮತ್ತೆ ಜನಮನ್ನಣೆ ಸಿಕ್ಕೆ ಸಿಗುತ್ತದೆ. ಆದ್ದರಿಂದಲೇ ನಮ್ಮ ಪಕ್ಷ ಇಂದು ರೈತರು ಕಾರ್ಮಿಕರ ನಡುವೆ ಚಳುವಳಿಗಳನ್ನು ಬಲಪಡಿಸುತ್ತಾ ಜನಮಾನಸದಲ್ಲಿ ಉಳಿಯುತ್ತಿದೆ, ಬೆಳೆಯುತ್ತಿದೆ. ಇಂದು ದೇಶದಾದ್ಯಂತ 22 ರಾಜ್ಯಗಳಲ್ಲಿ ನಮ್ಮ ಪಕ್ಷದ ಚಟುವಟಿಕೆಗಳು ನಡೆಯುತ್ತಿವೆ.
ವಿಚಾರ ಮತ್ತು ಮಾರ್ಗ ಎರಡು ಸ್ಪಷ್ಟವಾಗಿದ್ದರೆ ಗೆಲುವು ನಿಶ್ಚಿತ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ಅಂತಿಮವಾಗಿ ಈ ವಿಚಾರಗಳನ್ನು ಜನತೆಗೆ ತಲುಪಿಸಿ, ಜನಪರ ಹೋರಾಟಗಳಲ್ಲಿ ತೊಡಗಿರುವ ಅಭ್ಯರ್ಥಿ ಡಿ.ಸುಜಾತ ಅವರನ್ನು ಗೆಲ್ಲಿಸಬೇಕೆಂದು ಕಾ|| ಕೆ.ರಾಧಾಕೃಷ್ಣ ಅವರು ಕರೆ ನೀಡಿದರು.

ಸಂವಾದದ ಪ್ರಾರಂಭದಲ್ಲಿ ಪಕ್ಷದ ಸ್ಥಳೀಯ ಸಮಿತಿ ಮುಖಂಡರಾದ ಕಾ|| ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಕಾ|| ಸುಜಾತ.ಡಿ ಮತ್ತು ಪಕ್ಷದ ರಾಜ್ಯ ಮುಖಂಡರಾದ ಕಾ|| ಎಂ.ಎನ್ ಮಂಜುಳ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!