ಚಿತ್ರದುರ್ಗ: ಜಾಗತೀಕರಣ, ಉದಾರೀಕರಣ, ಕೈಗಾರಿಕರಣಗಳ ಆರ್ಭಟದೊಳಗೆ ಆರ್ಥಿಕ ನೆಲೆಯನ್ನು ಗ್ರಹಿಸುವುದು ಬಹು ಮುಖ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.
ಬೆಳಗಟ್ಟದಲ್ಲಿ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ 21ನೇ ಮಹಾರಥೋತ್ಸವ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ, ಸಮನ್ವಯ ಸದ್ಗುರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಆಶಾ ಟಿ. ಅವರ “ಚಿತ್ರದುರ್ಗ ನಗರಸಭೆ : ಆರ್ಥಿಕ ಅಧ್ಯಯನ’’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬೆಳಗಟ್ಟದ ಶ್ರೀಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿ ಮಠದ ಸಂಸ್ಥಾಪಕ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಅಮ್ಮ ಮಹದೇವಮ್ಮ ಅವರ ಮಗಳಾದ ಆಶಾ ಅವರು ತಾಯಿಯ ಸಂಸ್ಕಾರದ ತಳಹಾದಿಯಲ್ಲಿ ಶಿಕ್ಷಣ ಪಡೆದಿರುವವರು. ಗಂಡುಮೆಟ್ಟಿನ ನಾಡಾದ ಚಿತ್ರದುರ್ಗದ ನಗರಸಭೆಯ ಆರ್ಥಿಕತೆಯನ್ನು ಸಂಶೋಧನಾ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು, ಆ ಮೂಲಕ ಸ್ಥಳೀಯ ಸರ್ಕಾರದ ಮಹತ್ವವನ್ನು, ಜನತೆಯ ಅಭಿವೃದ್ಧಿಗೆ ನೆರವಾಗುವ ಬಗೆಯನ್ನು ವಿವರಿಸಿರುವರು.
ಮಾನವ ಬದುಕಿನ ಸ್ವರೂಪವನ್ನೆಲ್ಲ ಅಂತರ್‍ಗತವಾಗಿಸಿಕೊಂಡಿರುವ ಆರ್ಥಿಕ ಕ್ಷೇತ್ರವನ್ನು ಅಧ್ಯಯನ ಮಾಡುವ ಮೂಲಕ ಅಭಿವೃದ್ಧಿಗೆ ಸತ್ಪಥವನ್ನು ತೋರಿಸಿರುವರು ಎಂದರು. ಜಾಗತೀಕರಣ, ಉದಾರೀಕರಣ, ಕೈಗಾರಿಕರಣಗಳ ಆರ್ಭಟದೊಳಗೆ ಆರ್ಥಿಕ ನೆಲೆಯನ್ನು ಗ್ರಹಿಸುವುದು ಬಹು ಮುಖ್ಯವಾಗಿದೆ. ನಗರಸಭೆಯ ಆರ್ಥಿಕ ಲೋಕವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ನಗರಸಭೆಯ ವಾಸ್ತವತೆಗೆ ಹಿಡಿದಕನ್ನಡಿಯಿದು ಎಂದರು.
`ನಡೆದಾಡುವ ದೇವರು, ಮಾತಾಡುವ ದೇವರು’’ ಎಂಬ ಅಭಿಧಾನಕ್ಕೆ ಪಾತ್ರರಾಗಿರುವ ಅಪರೂಪದ ದಾರ್ಶನಿಕ, ಆಧ್ಯಾತ್ಮಿಕ ಮಾತೆಯಾದ ಅಮ್ಮ ಮಹದೇವಮ್ಮ ಅವರ ಸೇವೆ ಅನನ್ಯವಾದುದು. ಬೆಳಗಟ್ಟ ಗ್ರಾಮದಲ್ಲಿ ಸುಮಾರು ಮೂರು ದಶಕಗಳ ಹಿಂದೆ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿಯ ಮಠವನ್ನು ಸ್ಥಾಪಿಸಿ, ಅದರ ಸಂಸ್ಥಾಪಕ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಆದರ್ಶ ಮತ್ತು ಅನುಕರಣೀಯವಾದುದು.
ಅಮ್ಮ ಮಹದೇವಮ್ಮ ಅವರ ಸೇವೆಗೆ ಒತ್ತಾಸೆಯಾಗಿ ನಿಂತಿರುವ ಅವರ ಮಕ್ಕಳ ಸೇವಾ ಮನೋಧರ್ಮ ಅಪೂರ್ವವಾದುದು. ಇಂತಹ ಮಹಾ ತಾಯಿಯ ಮಗಳಾದ ಡಾ. ಆಶಾ ಟಿ. ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ನಿರತರಾಗಿವುದು ಅಭಿನಂದನಾರ್ಹವಾದುದು. ಉನ್ನತ ಶಿಕ್ಷಣ ಪಡೆದು, ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವುದು ಅವರ ಸಾಧನೆಗೆ ಹಿಡಿದ ರನ್ನಗನ್ನಡಿ. ಅವರ ಸಂಶೋಧನಾ ಅಧ್ಯಯನ ಚಿತ್ರದುರ್ಗ ನಗರದ ಅಭಿವೃದ್ಧಿಗೆ ಪ್ರೇರೇಕಶಕ್ತಿಯಾಗಿದೆ.
ಅವರು ತೋರಿಸಿರುವ ಮಾರ್ಗಗಳನ್ನು ಅನುಸರಿಸುವ ಅಗತ್ಯವಿದೆ. ಸಂಶೋಧನಾ ಬರಹ ವ್ಯಕ್ತಿ ಮತ್ತು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುವ ಸಾಧನ. ಆದರ್ಶ ಸಮಾಜದ ಕನಸ್ಸು ಸಂಶೋಧನಾ ಅಧ್ಯಯನಕ್ಕೆ ಇರುತ್ತದೆ. ಸಂಶೋಧಕರ ಬೌದ್ಧಿಕ ಜಗತ್ತು ಅನುಪಮವಾದುದು. ಬರಹಗಾರರ ಸಂಖ್ಯೆ ಹೆಚ್ಚಾದಂತೆ ಸಾಮಾಜಿಕ ವ್ಯವಸ್ಥೆ ಸಾಮರಸ್ಯವಾಗಿರುತ್ತದೆ ಎಂದು ಚಿತ್ರದುರ್ಗ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
“ಸಮನ್ವಯ ಸದ್ಗುರು’’ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬ್ರಹ್ಮವಿದ್ಯಾನಗರದ ಭಗೀರಥ ಪೀಠದಾಧ್ಯಕ್ಷರಾದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ಇಂದು ಮಾನವೀಯ ಮೌಲ್ಯಗಳು ಕಳೆದು ಹೋಗುತ್ತವೆ. ಅವುಗಳ ವೃದ್ಧಿಗೆ ಭಕ್ತಿ ಮಾರ್ಗ ಉತ್ತಮ ಸಾಧನ. ಭಕ್ತಿಯಿಂದ ವ್ಯಕ್ತಿ ಶಕ್ತಿವಂತನಾಗುತ್ತಾನೆ. ಸಂಶೋಧಕರು ಸದಾ ಸಮಾಜದ ಒಳತಿಗಾಗಿ ಚಿಂತಿಸುತ್ತಿರುತ್ತಾರೆ.
ಇಂತಹ ಸಂಶೋಧನೆಯಲ್ಲಿ ಯಶಸ್ವಿಯಾಗಿ, ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿರುವ ಡಾ. ಆಶಾ ಟಿ. ಅವರು ಸಾತ್ವಿಕ ವ್ಯಕ್ತಿತ್ವದವರು. ತಾಯಿಯ ಜೊತೆ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವುದು, ಅವರ ಶ್ರದ್ಧೆ, ಅಧ್ಯಯನದ ಶಿಸ್ತು, ಸಂಯಮ ಫಲವಾಗಿ “ಚಿತ್ರದುರ್ಗ ನಗರಸಭೆ : ಆರ್ಥಿಕ ಅಧ್ಯಯನ’’ ಎಂಬ ಸಂಶೋಧನಾ ಗ್ರಂಥ ಪ್ರಕಟಿಸಿರುವುದಕ್ಕೆ ಅನನ್ಯವಾದುದು ಎಂದರು.
ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿಮಠದಪೀಠಾಧ್ಯಕ್ಷರಾದ ಮಹದೇವಮ್ಮ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಸಿದ್ದರು.
ಯುವ ರಾಜಕಾರಣಿ ಪಾಪೇಶ್ ನಾಯಕ ಅವರು ಉದ್ಘಾಟಿಸಿದರು. ಜೀ ಟಿ.ವಿ. ಸರಿಗಪ ಕಾರ್ಯಕ್ರಮದ ಗಾಯಕರಾದ ಶರಧೀ ಪಾಟೀಲ್ ಮತ್ತು ಸುಪ್ರೀತ್ ಫಾಲ್ಗುಣ ಅವರಿಂದ ಗಾಯನ ನೆರವೇರಿತು. ಸ್ವರ್ಣಗೌರಿ ಪ್ರಾರ್ಥಿಸಿದರು. ಬಿ.ಟಿ.ಸೋಮೇಂದ್ರ ಸ್ವಾಗತಿಸಿದರು. ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಯುಗಧರ್ಮರಾಮಣ್ಣ, ತಿಮ್ಮಪ್ಪ, ಅನುಸೂಯಮ್ಮ ಬಿ.ಟಿ.ಸಿದ್ದೇಶ್, ಅಶ್ವತ್ಥಣ್ಣ ಉಪಸ್ಥಿತರಿದ್ದರು. ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮವನ್ನು ಬೆಳಗುಶ್ರೀ ಎಸ್.ನೆಲ್ಲಿಕಟ್ಟೆ ನೆರವೇರಿಸಿದರು.