Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುರುಮರಡಿಕೆರೆಯಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ : ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

Facebook
Twitter
Telegram
WhatsApp

ಚಿತ್ರದುರ್ಗ. ನ.29: ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿ, ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಮರಡಿಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ, ಸೌಲಭ್ಯ ತಲುಪಿಸಬೇಕು ಎಂಬುವುದು ಜನತಾ ದರ್ಶನದ ಮುಖ್ಯ ಆಶಯವಾಗಿದ್ದು, ಜನತಾ ದರ್ಶನದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲಾಗುತ್ತಿದೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ ವಹಿಸಲಾಗುವುದು. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 160 ಮನೆಗಳಿಗೆ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಎಲ್ಲ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು. ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-4 ರಿಂದ ಯರೇಹಳ್ಳಿವರೆಗೂ ಉತ್ತಮ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ದಪಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿತ್ರದುರ್ಗ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಜಾಗವನ್ನು ವಿಂಡ್‍ಮಿಲ್ ಕಂಪನಿಗೆ ನೀಡಲಾಗಿದ್ದು, ವಿಂಡ್‍ಮಿಲ್ ಕಂಪನಿಯ ಸಿಎಸ್‍ಆರ್ ನಿಧಿಯು ವಿಧಾನಸಭಾ ಕ್ಷೇತ್ರದ ಜನರಿಗೆ ಉಪಯೋಗವಾಗಬೇಕು. ಈ ಕುರಿತು ಮುಂದಿನ ದಿನಗಳಲ್ಲಿ ವಿಂಡ್‍ಮಿಲ್ ಕಂಪನಿಯವರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಎಲ್ಲ ಇಲಾಖೆಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿ,  ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಆಡಳಿತ ಕೊಡುವಂತೆ ನಿರ್ದೇಶನ ನೀಡಿದ್ದಾರೆ ಎಂದರು.
ಕಳೆದ ಎರಡು ತಿಂಗಳಿಂದ ಜನತಾ ದರ್ಶನ ಕಾರ್ಯಕ್ರಮ ಶುರುವಾಗಿದ್ದು, ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಜನತಾ ದರ್ಶನ ಎಂಬುವುದು ಜನರ ದರ್ಶನವಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜನರು ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪಲಿದೆ. ಜನರಿಗೆ ಯಾವುದೇ ಅಡೆತಡೆಯಿಲ್ಲದೇ ಕಾಲವಿಳಂಬವಿಲ್ಲದೇ ತಕ್ಷಣವೇ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಜನತಾ  ದರ್ಶನದಲ್ಲಿ ಇದುವರೆಗೂ 1191 ಅರ್ಜಿಗಳು ಸ್ವೀಕೃತವಾಗಿದ್ದು, 791 ಅರ್ಜಿಗಳನ್ನು ವಿಲೇಪಡಿಸಲಾಗಿದ್ದು,  400 ಅರ್ಜಿಗಳು ವಿಲೇಪಡಿಸುವುದು ಬಾಕಿ ಇದೆ, ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇಪಡಿಸಲಾಗುವುದು ಎಂದು ಹೇಳಿದರು.

ಜನತಾ ದರ್ಶನ ಸರ್ಕಾರದ ಮಹತ್ವಾಕಾಂಕ್ಷೆಯ ಉತ್ತಮ ಕಾರ್ಯಕ್ರಮವಾಗಿದೆ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಮನೆಬಾಗಿಲಿಗೆ ಹೋಗಿ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಹರಿದ್ದರೆ ತಕ್ಷಣವೇ ಸೌಲಭ್ಯ ತಲುಪಿಸಲು ಕ್ರಮವಹಿಲಾಗುವುದು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸರ್ವೇ, ಪೋಡಿ ಮಾಡಲು ಸಮಯ  ಬೇಕಾಗಲಿದೆ. ಹಾಗಾಗಿ ಅಂತಹ ವಿಷಯಗಳನ್ನು ಒಂದು ತಿಂಗಳೊಳಗೆ ಬಗೆಹರಿಸಲಾಗುವುದು. ಬಗರ್‍ಹುಕುಂ ಹಾಗೂ ಸಾಗುವಳಿ ಚೀಟಿ ನೀಡುವಂತೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾದ ತಕ್ಷಣವೇ ಅರ್ಜಿಗಳನ್ನು ವಿಲೇಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಅಹವಾಲುಗಳನ್ನು ಪರಿಹರಿಸಲು ಪ್ರತ್ಯೇಕವಾಗಿ ಆಗಮಿಸಿ, ಖುದ್ದು ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಗ್ರಾಮದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪಟ್ಟಿ ತಯಾರಿಸಿ, ಸರ್ಕಾರದ ಮಟ್ಟದಲ್ಲಿ ಪರಿಹಾರ ಆಗುವ ಕೆಲಸಗಳಿಗೆ ಸರ್ಕಾರದ ಗಮನ ಸೆಳೆಯಲು ಶಾಸಕರನ್ನು ಕೋರಲಾಗುವುದು. ಜಿಲ್ಲಾ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುವರು. ವಾರದೊಳಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ ಅವರು, ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ  ಶೀಘ್ರವೇ ಭೂಮಿ ಮಂಜೂರು ಮಾಡಲಾಗುವುದು ಎಂದರು.

ವಿವಿಧ ಸೌಲಭ್ಯಗಳ ವಿತರಣೆ: ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಅಂಗವಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.

ಕಂದಾಯ ಇಲಾಖೆಯಿಂದ ಪಿಂಚಣಿ ಆದೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮಿ ಬಾಂಡ್, ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‍ಬುಕ್ ವಿತರಣೆ, ಕಾರ್ಮಿಕ ಇಲಾಖೆಯಿಂದ ಹೆರಿಗೆ ಬಾಂಡ್, ವಸತಿ ಯೋಜನೆಯಡಿ ಕಾರ್ಯಾದೇಶ, ರೇಷ್ಮೆ ಇಲಾಖೆಯಿಂದ ರೇಷ್ಮೆಹುಳು ಸಾಕಾಣಿಕೆ ಮನೆಕಟ್ಟಲು ಸಹಾಯಧನ, ಪಶು ಇಲಾಖೆಯಿಂದ ಕುರಿಗಳಿಗೆ ಜಂತುನಾಶಕ ಔಷಧಿ, ರೈತರಿಗೆ ಮೇವಿನಬೀಜದ ಕಿಟ್ ವಿತರಣೆ, ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್ ಸೆಟ್ ವಿತರಣೆ, ಅಂಗವಿಕಲರಿಗೆ ಸೈಕಲ್ ಹಾಗೂ ಶ್ರವಣಸಾಧನ ವಿತರಣೆ ವಿತರಿಸಲಾಯಿತು.

ಸಮಸ್ಯೆಗಳಿಗೆ ಪರಿಹಾರದ ಸ್ಪಂದನೆ : ಕುರುಮರಡಿಕೆರೆ ಗ್ರಾಮದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳ ಕುರಿತು ಶಾಸಕ ಕೆ.ಸಿ.ವೀರೇಂದ್ರ ಪ್ಪಪ್ಪಿ ಅವರಲ್ಲಿ ಹೇಳಿಕೊಂಡರು.

ವೃದ್ಧೆಯೊಬರು ಮಾತನಾಡಿ ಗ್ರಾಮದ ಉಪ ಆರೋಗ್ಯಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ. ವಯಸ್ಸಾದವರು ಚಿಕಿತ್ಸೆಗಾಗಿ ಚಿತ್ರದುರ್ಗ ನಗರಕ್ಕೆ ಹೋಗಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

ಆರೋಗ್ಯ ಕೇಂದ್ರಕ್ಕೆ ನಿವಾಸಿ ವೈದ್ಯಾಧಿಕಾರಿ ನೇಮಕ ಮಾಡಿ, ವೈದ್ಯಕೀಯ ಸಿಬ್ಬಂದಿ ಗ್ರಾಮದಲ್ಲಿಯೇ ಇದ್ದು ಜನರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಶಾಸಕರಲ್ಲಿ ಕೋರಿಕೊಂಡರು.  ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಸಮಸ್ಯೆಯ ಕುರಿತು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗೀರಿಶ್ ಅವರನ್ನು ವೇದಿಕೆ ಮೇಲೆ ಕರೆಯಿಸಿ ಪ್ರಶ್ನಿಸಿದರು. ‘ಗ್ರಾಮದ ಉಪಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ಸಹಾಯ ಸಿಬ್ಬಂದಿಗಳು ಇದ್ದಾರೆ. ಇವರು ಪ್ರತಿನಿತ್ಯ ಸುತ್ತಮುತ್ತಲಿನ  ಹಳ್ಳಿಗಳಿಗೂ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುವರು ಹಾಗಾಗಿ ಉಪ ಆರೋಗ್ಯಕೇಂದ್ರದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಇಲ್ಲಾ ಎಂಬುದನ್ನು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ. ಗೀರಿಶ್ ತಿಳಿಸಿದರು.

ಕುರುಮರಡಿಕೆರೆ ಉಪ ಆರೋಗ್ಯಕೇಂದ್ರಕ್ಕೆ ವಾರದಲ್ಲಿ ಪೂರ್ಣ ಪ್ರಮಾಣದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸುವಂತೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸೂಚಿಸಿದರು.

ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುರುಮರಡಿಕೆರೆ ಹಾಗೂ ಚಿತ್ರದುರ್ಗದ ನಡುವೆ ಹೆಚ್ಚಿನ ಸಾರಿಗೆ ಬಸ್ ಸಂಚಾರಕ್ಕೆ ಗ್ರಾಮಸ್ಥರು ಮನವಿ ಮಾಡಿದರು. ನಾಳೆಯಿಂದಲೇ ಬಸ್ ಸಂಚಾರ ಆರಂಭಿಸುವಂತೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ವೇಳಾ ಪಟ್ಟಿಯನ್ನು ಬದಲಿಸುವಂತೆ ಕರ್ನಾಟಕ ರಾಜ್ಯ ಸಾರಿಗೆ ಅಧಿಕಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.

ಪಶುವೈದ್ಯರು ಸೋಮವಾರ ಮಾತ್ರ ಗ್ರಾಮಕ್ಕೆ ಬರುತ್ತಾರೆ ಎಂದು ಗ್ರಾಮದ ವೃದ್ಧರೋರ್ವ ಶಾಸಕರ ಬಳಿ ಅಳಲು ಹೇಳಿಕೊಂಡರು.  ಅಲ್ಲದೆ ಗ್ರಾಮದಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ನಂಬಿಕೊಂಡು ಬಹಳಷ್ಟು ಜನರು ಜೀವನ ಸಾಗಿಸುತ್ತಿದ್ದಾರೆ.

ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರ  ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಯರೇಹಳ್ಳಿ ಪಶು ಆಸ್ಪತ್ರೆ, ಗ್ರಾಮದಿಂದ 29 ಕಿ.ಮೀ. ದೂರ ಇದೆ. ಕುರುಮರಡಿಕೆರೆ ಗ್ರಾಮದಲ್ಲಿ ಪಶುವೈದ್ಯರು ಹಾಗೂ ಪಶು ನಿರೀಕ್ಷಕರ ಹುದ್ದೆಗಳು ಖಾಲಿ ಇವೆ. ಆದ್ದರಿಂದ ಬೇರೆ ಪಶುವೈದ್ಯರನ್ನು ಹಾಗೂ ಪಶುನಿರೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಪಶುಇಲಾಖೆ ಉಪನಿರ್ದೇಶಕ ಡಾ. ಬಾಬು ರತ್ನ ಮಾಹಿತಿ ನೀಡಿದರು.  ತಕ್ಷಣವೇ ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರ ನಿರ್ಮಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಸ್ವಚ್ಛತೆ, ಚರಂಡಿ, ರಸ್ತೆ, ನಿವೇಶನ ಮಂಜೂರಾತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಜನರೊಂದಿಗೆ ಚರ್ಚಿಸಿ ಪರಿಹಾರ ಮಾರ್ಗಗಳನ್ನು ಶಾಸಕರು ತೋರಿದರು.

ಕಾರ್ಯಕ್ರಮದಲ್ಲಿ ಇಂಗಳದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿರುವಲ್ಲಪ್ಪ, ಉಪಾಧ್ಯಕ್ಷೆ ನೇತ್ರಮ್ಮ, ಮಾಜಿ ಉಪಾಧ್ಯಕ್ಷೆ ಬೃಂದಾ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಾಲ್ಲೂಕು ಪಂಚಾಯಿತಿ ಇಒ ರವಿಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!