ಅಫ್ಘಾನಿಸ್ತಾನ: ಇಲ್ಲಿನ ತಾಲಿಬಾನ್ ಸರ್ಕಾರ ಮೊದ ಮೊದಲಿಗೆ ಸಡಿಲ ಬಿಟ್ಟು ಈಗ ಹೆಣ್ಣು ಮಕ್ಕಳ ಮೇಲೆ ಸಾಕಷ್ಟು ನಿಯಮವನ್ನು ಹೇರುತ್ತಿದೆ. ಹೆಣ್ಣು ಮಕ್ಕಳ ಮೇಲೆ ಕಠಿಣ ನಿಯಮಗಳನ್ನು ಹಾಕಿದ್ದು, ಆ ನಿಯಮ ಸಡಿಲಗೊಳಿಸುವಂತೆ ವಿಶ್ವಸಂಸ್ಥೆ ಕೂಡ ಸೂಚನೆ ನೀಡಿತ್ತು. ಆದರೆ ವಿಶ್ವಸಂಸ್ಥೆಯ ಕರೆಗೂ ಕ್ಯಾರೆ ಎಂದಿಲ್ಲ ತಾಲಿಬಾನ್.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರೆಯನ್ನು ತಿರಸ್ಕರಿಸಿರುವ ತಾಲಿಬಾನದ ವಿದೇಶಾಂಗ ಸಚಿವಾಲಯ, ಅಫ್ಘಾನಿಸ್ತಾನದ ಜನ ಪ್ರಬಲವಾಗಿ ಮುಸ್ಲಿಂರಾಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಇಸ್ಲಾಂ, ಹಿಜಾಬ್ ಅನ್ನು ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಅನುಗುಣವಾಗಿ ಪರಿಗಣಿಸುತ್ತದೆ ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಟಿ ತಿಳಿಸಿದ್ದಾರೆಂದು ವರದಿಯಾಗಿದೆ.
ತಾಲಿಬಾನ್ ಸರ್ಕಾರ, ಮಹಿಳೆಯರ ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ವಿಚಾರಗಳು ಸೇರಿದಂತೆ ಮಹಿಳೆಯರ ಮೇಲೆ ಹಲವು ನಿರ್ಬಂಧ ಹೇರಿದೆ. ಅದರಲ್ಲೂ ಸಂಪೂರ್ಣ ದೇಹ ಮುಚ್ಚಿಕೊಳ್ಳುವಂತೆ ಬುರ್ಖಾ ಧರಿಸಬೇಕೆಂದು ಸೂಚಿಸಿದೆ. ಹೀಗಾಗಿ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ತಕ್ಷಣವೇ ತೆಗೆದು ಹಾಕಬೇಕೆಂದು ವಿಶ್ವಸಂಸ್ಥೆ ಸೂಚಿಸಿತ್ತು. ಆದರೆ ಅದನ್ನು ತಾಲಿಬಾನ್ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ.