Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಶ್ವ ಕಂಡ ಅಪರೂಪದ ಗುರುಗಳು ಶ್ರೀ ರಾಘವೇಂದ್ರ ಸ್ವಾಮಿಗಳು : 351 ಆರಾಧನಾ ಮಹೋತ್ಸವ ಪ್ರಯುಕ್ತ ವಿಶೇಷ ಲೇಖನ

Facebook
Twitter
Telegram
WhatsApp

 

 


ಸಕಲ ಜನರ ಅಪೇಕ್ಷೆಯನ್ನು ಈಡೇರಿಸಿದ ಗುರುಗಳು
ವಿಶ್ವಾರಾಧ್ಯ ಮಹಾಮಹಿಮೋಪೇತರಾದ
ಶ್ರೀ ಗುರು ರಾಘವೇಂದ್ರ ಗುರು ಸಾರ್ವ
ಭೌಮರ ಮಹಿಮೆಯನ್ನು ತಿಳಿಯೋಣ, ವರ ಪಡೆಯೋಣ.

ವೀಣಾ ತಿಮ್ಮಣ್ಣ ಭಟ್ಟರು ಹಾಗೂ ಗೋಪಿಕಾಂಬಾ ಎಂಬ ದಂಪತಿಗಳು ಪುತ್ರ ಪ್ರಾಪ್ತಿಗಾಗಿ ಸಪ್ತಗಿರಿ ವಾಸನಾದ ಶ್ರೀ ಶ್ರೀನಿವಾಸನನ್ನು ಸೇವೆ ಮಾಡಿದರು. ಶ್ರೀ ವೆಂಕಟೇಶನ ದಯದಿಂದ 1595 ರಲ್ಲಿ ಕಾಂಚೀಪುರದ ಭುವನಗಿರಿಯಲ್ಲಿ ವೆಂಕಣ್ಣಭಟ್ಟರಾಗಿ ಜನಿಸಿದರು. ತಂದೆಯವರಿಂದ ಉಪನಯನ ಸಂಸ್ಕಾರವು ಆಯಿತು.
ಪ್ರಾರಂಭಿಕ ಅಧ್ಯಯನ ತಮ್ಮ ಅಗ್ರಜರಾದ ಗುರು
ರಾಜಾಚಾರ್ಯರಲ್ಲಿ ಹಾಗೂ ಅಕ್ಕ ವೆಂಕಮ್ಮಳ ಪತಿಯಾದ
ಮಧುರೈ ಲಕ್ಷ್ಮೀನರಸಿಂಹಾಚಾರ್ಯರಯಲ್ಲಿ ಆಯಿತು.

104 ಗ್ರಂಥಗಳನ್ನು ರಚಿಸಿದ, 64 ವಿದ್ಯೆಗಳನ್ನು ಕರಗತ ಮಾಡಿಕೊಂಡ ಶ್ರೀ ವಿಜಯಿಂದ್ರತೀರ್ಥರ ಹಾಗೂ ಆಶ್ರಮ ಗುರುಗಳಾದ  ಶ್ರೀ ಸುಧೀಂದ್ರತೀರ್ಥರ ಸನ್ನಿಧಾನದಲ್ಲಿ ಉನ್ನತ ವ್ಯಾಸಂಗವನ್ನು ಪಡೆದರು. ಗುರುದ್ವಯರ ಅನುಗ್ರಹದಿಂದ ವಿಶೇಷ ಪಾಂಡಿತ್ಯವನ್ನು ಪಡೆದ ವೆಂಕಣ್ಣಭಟ್ಟರು ವೀಣಾ ವಾದನದಲ್ಲಿಯೂ ಪ್ರಾವೀಣ್ಯವನ್ನು ಹೊಂದಿದ್ದರು. ಲೋಕದಲ್ಲಿ ವೀಣಾ ವೆಂಕಣ್ಣ ಭಟ್ಟರೆಂದು ಪ್ರಸಿದ್ದರಾದರು.
ಶಾಸ್ತ್ರಗಳ ಅಧ್ಯಯನದ ಫಲ ರೂಪವಾಗಿ ಶ್ರೀ ಮನ್ನ್ಯಾಯಸುಧೆಗೆ “ಪರಿಮಳ” ಎಂಬ ಟಿಪ್ಪಣಿಯನ್ನು ರಚಿಸಿದರು. “ಪರಿಮಳಾಚಾರ್ಯರೆಂದೇ” ಪ್ರಸಿದ್ದರಾದರು.
ಇವರು ಮಂತ್ರಸಿದ್ಧಿಯನ್ನು ಪಡೆದವರೂ ಆಗಿದ್ದರು. ಒಮ್ಮೆ ಅಗ್ನಿಸೂಕ್ತ ಪಾರಯಣ ಮಾಡುತ್ತಾ ಗಂಧವನ್ನು ತೇಯ್ದಿದ್ದರು. ಅದನ್ನು ಧರಿಸಿದ ಎಲ್ಲ ಭಕ್ತರ ಮೈ ಉರಿಯಲಾರಂಭಿಸಿತು. ಮೆಣಸು,
ಮೆಣಸಿನಕಾಯಿಯನ್ನು ಸೇರಿಸಿ ಗಂಧ ತೇಯ್ದಿದ್ದಾರೆಂದು ಎಲ್ಲರೂ ಮಾತನಾಡತೊಡಗಿದರು. ಈ ಮಾತು ವೀಣಾ ವೆಂಕಣ್ಣಚಾರ್ಯರ ಕಿವಿಗೂ ಬಿತ್ತು. ಅಗ್ನಿಸೂಕ್ತ ಪಠನ ಮಾಡುತ್ತ ಗಂಧ ತೇಯ್ದ ಕಾರಣ ತಂಪು ನೀಡುವ ಗಂಧ ಉರಿಯುತ್ತಿದೆ
ಎಂದು ತಿಳಿದರು. ಪುನಃ ವರುಣ ಸೂಕ್ತ ಪಠಿಸುತ್ತ ಗಂಧವನ್ನು
ತೇಯ್ದು ಸಕಲ ಸಜ್ಜನರಿಗೂ ನೀಡಿದರು. ಗಂಧವನ್ನು ಧರಿಸಿದ ಎಲ್ಲಸಜ್ಜನರಿಗಾದ ಉರಿಯು ಉಪಶಮನವಾಯಿತು. ಇದರಿಂದ ಮಂತ್ರಗಳಲ್ಲಿ ಇರುವ ಶಕ್ತಿಯನ್ನು ತೋರಿಸಿದರು.

ಗೃಹಸ್ಥ ಧರ್ಮದ ಷಟ್ಕರ್ಮಗಳ ಪರಿಪಾಲನೆಗಾಗಿ ಸರಸ್ವತಿ ಎಂಬ ಕನ್ಯೆಯನ್ನು ವಿವಾಹಿತರಾದರು. ಅವಳಲ್ಲಿ ಶ್ರೇಷ್ಟವಾದ ಲಕ್ಷ್ಮೀನಾರಾಯಣ ಎಂಬ ಪುತ್ರರತ್ನವನ್ನು ಪಡೆದರು.
ಶಾಸ್ತ್ರನಿಷ್ಠೆ, ಮಂತ್ರಸಿದ್ಧಿ, ತ್ಯಾಗ ತತ್ವಪ್ರಸಾರ, ಸದಾಚಾರ ನಿಷ್ಠೆ,  ಮುಂತಾದ ಗುಣಗಳಿಂದ ಕೂಡಿದ ಇವರನ್ನು ಸಂನ್ಯಾಸಧೀಕ್ಷೆಯು ಕೈಬೀಸಿ ಕರೆಯಿತು.

ಪಾಲ್ಗುಣ ಶುದ್ಧ ದ್ವಿತೀಯಾದಂದು ವಿದ್ಯಾಗುರುಗಳಾದ ಶ್ರೀ ಸುಧೀಂದ್ರ ತೀರ್ಥರಿಂದ ಸನ್ಯಾಸ ಧೀಕ್ಷೆ ಪಡೆದು ಶ್ರೀ ರಾಘವೇಂದ್ರ ತೀರ್ಥರೆಂದೆನಿಸಿರು.

ಸಂಚಾರ ಕ್ರಮೇಣ ತಂಜಾವೂರಿಗೆ ಆಗಮಿಸಿದರು. ಆ ಪ್ರಾಂತದಲ್ಲಿಆವರಿಸಿದ ಕ್ಷಾಮವನ್ನು ಅರಿತರು. ವಿಜಯಪ್ರದನಾದ ಶ್ರೀರಾಮ ಬೀಜಾಕ್ಷರ ಮಂತ್ರವನ್ನು ಧಾನ್ಯ ರಾಶಿಯಲ್ಲಿ ಬರೆದು,  ಬರಗಾಲದಲ್ಲಿಯೂ ಅಕ್ಷಯ ಧಾನ್ಯವನ್ನು ಕರುಣಿಸಿದರು.

ಭಜಿಸುವ ಭಕುತರಿಗೆ ಕಲ್ಪವೃಕ್ಷರಾಗಿದ್ದಾರೆ. ನಮಿಸುವ ಜನರ ಪಾಲಿಗೆ ಕಾಮಧೇನು ಆಗಿದ್ದಾರೆ ಶ್ರೀ ಗುರುರಾಯರು.
ಕಲ್ಪವೃಕ್ಷದ ಸ್ವಭಾವ ತಾನಿದ್ದ ಸ್ಥಳದಲ್ಲಿ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ನೀಡುವುದು. “ಕಾಮಧೇನು” ಪ್ರಾರ್ಥಿಸುವ ಸುಜನರ ಸಮೀಪ ಬಂದು ಅವರ ಅಪೇಕ್ಷೆಗಳನ್ನು ಈಡೇರಿಸುವುದು. ಕಲ್ಪವೃಕ್ಷವು ಭಕುತರ ಸಮೀಪ ಬರುವುದಿಲ್ಲ ಹಾಗೆ ಕಾಮಧೇನುವಿನ ಸಮೀಪ ನಮಗೆ ಹೋಗಲಾಗುವುದಿಲ್ಲ.
ಆದರೆ, ಶ್ರೀಗುರುರಾಯರು ಕಲ್ಪವೃಕ್ಷದಂತೆ ತಾವಿರುವ ಸ್ಥಳಕ್ಕೆ ಬರುವ ಭಕ್ತರನ್ನು ಉದ್ಧರಿಸುವರು. ತಮ್ಮ ಸಮೀಪ ಬರಲಾಗದ ಭಕ್ತರ ಬಳಿಗೆ ಕಾಮಧೇನುವಿನಂತೆ ಬಂದು ಸಕಲ ಇಷ್ಟಾರ್ಥಗಳನ್ನು ಈಡೇರಿಸುವರು. ಅದಕ್ಕೆ ಅಪ್ಪಣ್ಣಚಾರ್ಯರು ಇವರನ್ನು “ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ” ಎಂದಿರುವರು.
ಸಂಚಾರ ಕ್ರಮೇಣ ದೆಹಲಿ ನಗರಕ್ಕೆ ಬಂದಾಗ, ನವಾಬರ ಮಗನಿಗೆ ಹಾವು ಕಚ್ಚಿ ಅಕಾಲಿಕ ಮರಣವು ಪ್ರಾಪ್ತವಾಗಿತ್ತು. ಆಗ ಶ್ರೀ ರಾಯರನ್ನು ನವಾಬರು ಮಗನನ್ನು ವಿಷದ ಭಾಧೆಯಿಂದ ರಕ್ಷಿಸಿರೆಂದು ಪ್ರಾರ್ಥಿಸಿದರು. ಶ್ರೀರಾಯರು ಗರುಡ ಮಂತ್ರ ಜಪಿಸಿ ಆ ಮಗುವಿನ ಅಪಮೃತ್ಯುವನ್ನು ಪರಿಹರಿಸಿದರು.
ಒಮ್ಮೆ ಆದವಾನಿಯ ಅಸುದುಲ್ಲಖಾನ್, ಇವರನ್ನು ಪರೀಕ್ಷಿಸಲು
ವಸ್ತ್ರದಿಂದ ಮುಚ್ಚಿದ ಮಾಂಸದ ತಟ್ಟೆಯನ್ನು ಶ್ರೀ ಗುರುರಾಯರ ಸಮೀಪದಲ್ಲಿ ತರಿಸಿ ಇಟ್ಟನು. ಶ್ರೀ ರಾಯರು ತಮ್ಮ ದಿವ್ಯ ದೃಷ್ಟಿಯಿಂದ ಇದು ಮಾಂಸವೆಂದು ಅರಿತು, ತೀರ್ಥ ಪ್ರೋಕ್ಷಣೆಯನ್ನು ಮಾಡುವ ಮೂಲಕ ಹಣ್ಣು ಹಂಪಲುಗಳನ್ನಾಗಿ ಮಾಡಿ ಅವರಿಗೆ ಆಶ್ಚರ್ಯವಾಗುವಂತೆ ಮಾಡಿದರು.

ಬಿದರಹಳ್ಳಿ ಕ್ಷೇತ್ರದಲ್ಲಿ ಇರುವಾಗ ಗ್ರಂಥಗಳನ್ನು ಬರೆಯುತ್ತಿದ್ದರು. ಆಗ ಮಸಿ (ಇಂಕು) ಮುಗಿದುಹೋಗಿತ್ತು. ಶಿಷ್ಯರಿಗೆ ಮಸಿಯನ್ನು ತೆಗೆದುಕೊಂಡು ಬರಲು ಆಜ್ಞಾಪಿಸಿದರು. ಶಿಷ್ಯರು ಮಸಿಯನ್ನು ಹುಡುಕುತ್ತಾ ಶ್ರೀನಿವಾಸಚಾರ್ಯರ ಬಳಿ ಬಂದರು. ಸಮಯ ವ್ಯರ್ಥವಾಗಬಾರದೆಂದು ಸ್ವತ: ಶ್ರೀರಾಯರೇ ಶಿಷ್ಯರು ಹೋದ  ಮಾರ್ಗವನ್ನು ಅನುಸರಿಸಿ ಶ್ರೀನಿವಾಸಾಚಾರ್ಯರ ಮನೆಗೆ ಬಂದರು. ಶುದ್ಧವಾದ ಮಸಿಯನ್ನು ಶ್ರೀಗುರುರಾಯರಿಗೆ ಸಮರ್ಪಿಸಲು ಶ್ರೀನಿವಾಸಾಚಾರ್ಯರು ಶುದ್ಧರಾಗಲು ತುಂಗಾಭದ್ರಾನದಿಗೆ ತೆರಳಿದರು. ಆಗ ಶ್ರೀ ರಾಘವೇಂದ್ರತೀರ್ಥರು ಶ್ರೀನಿವಾಸಾಚಾರ್ಯರು ರಚಿಸಿದ ಎಲ್ಲಾ ಗ್ರಂಥಗಳನ್ನು ಅವಲೋಕಿಸಿದರು. ಆ ಗ್ರಂಥಗಳಲ್ಲಿ ಇರುವ ಪದಲಾಲಿತ್ಯ ಪದಗಳ ಜೋಡಣೆ, ಭಾವಗಾಂಭೀರ್ಯ,
ವಿವರಣೆಗಳು ಇವುಗಳನ್ನು ಮಾತ್ರ ಕಾಣದೇ ಆ, ಆ, ಅಕ್ಷರ ಪದಾಭಿಮಾನಿ ದೇವತೆಗಳನ್ನು ಪ್ರತ್ಯಕ್ಷವಾಗಿ ಕಂಡರು. ಅಷ್ಟರಲ್ಲಿ ಶುದ್ಧರಾಗಿ ಬಂದ ಶ್ರೀನಿವಾಸಾಚಾರ್ಯರು, ಶುದ್ಧವಾದ ಮಸಿಯನ್ನು ಶ್ರೀರಾಘವೇಂದ್ರ ತೀರ್ಥರಿಗೆ ಸಮರ್ಪಿಸಿದರು.

ಶ್ರೀನಿವಾಸಾಚಾರ್ಯರು ರಚಿಸಿದ ಗ್ರಂಥಗಳನ್ನು ಕಂಡ ಶ್ರೀ ರಾಘವೇಂದ್ರತೀರ್ಥರು ತಮ್ಮ ಹೆಸರಿನಲ್ಲಿಯ “ತೀರ್ಥ” ಪದವಿಯನ್ನು ನೀಡಿ ತಮ್ಮ ಹೃದಯ ವೈಶಾಲ್ಯವನ್ನು ತೋರಿಸಿದರು. ಅಂದಿನಿಂದ ಶ್ರೀನಿವಾಸಾಚಾರ್ಯರು, ಶ್ರೀನಿವಾಸತೀಥರೆಂದೇ ಪ್ರಸಿದ್ಧರಾದರು. ಅಂದಿನಿಂದ ಶ್ರೀರಾಘವೇಂದ್ರತೀರ್ಥರು ಶ್ರೀಗುರುರಾಯರೆಂದೆನಿಸಿದರು.

ಗುರುರಾಯರ ಶಿಷ್ಯನೊಬ್ಬ ನಿತ್ಯವೂ ಗುರುಗಳಿಗೆ ಪಾದ ತೊಳೆಯಲು ನೀರನ್ನು ಕೊಡುತ್ತಿದ್ದನು. ಗುರುಗಳ ಸನ್ನಿಧಿಯಲ್ಲಿ ಅವನು ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದನು.ಗುರುಗಳು ಬಂದಾಕ್ಷಣ ಪಾದ ತೊಳೆಯುತ್ತಿದ್ದನು. ಪಾದ ತೊಳೆದ ನೀರು ಒಂದು ತೆಗ್ಗಿನಲ್ಲಿ ನಿಲ್ಲುತ್ತಿತ್ತು. ಎಂದಿನಂತೆ ಪಾದ ಪ್ರಕ್ಷಾಲನೆ ಮಾಡಿ, ಆ ಶಿಷ್ಯನು, ನಮ್ಮ ಹಿರಿಯರು ನನಗೆ ವಿವಾಹ ನಿಶ್ಚಯಿಸಿರುವರು,ಊರಿಗೆ ಹೋಗಲು ಮಂತ್ರಾಕ್ಷತೆಯನ್ನು ಕೊಡಿ ಎಂದು ಪ್ರಾರ್ಥಿಸಿದನು. ಶ್ರೀರಾಯರು ವಿವಾಹಕ್ಕೆ ಹಣವು ಎಷ್ಟು ಬೇಕಾಗಬಹುದು ಎಂದು ಕೇಳಿದರು.
ತಮ್ಮಿಂದ ಅನುಗ್ರಹ ಪೂರ್ವಕವಾಗಿ ಬಂದ ಮಂತ್ರಾಕ್ಷತೆಯಿಂದ
ವಿವಾಹವು ಸಾಂಗವಾಗಿ ನಡೆಯುವುದು ಎಂದು ನುಡಿದನು. ಮಂತ್ರಾಕ್ಷತೆಯ ಜೊತೆ ಏನಾದರೂ ಕೊಡಲೇಬೇಕು ಎಂಬ ಮಹಾದಿಚ್ಛೆ ನಮಗಿದೆ ಎಂದು ಶ್ರೀ ರಾಯರು ನುಡಿದರು.

ತಮ್ಮ ಪಾದತೊಳದೆ ನೀರಿನಿಂದ ಕೂಡಿದ ಮೃತ್ತಿಕೆಯನ್ನು ಅನುಗ್ರಹಿಸಿ ಎಂದು ಶಿಷ್ಯನು  ಭಕ್ತಿಯಿಂದ ಕೇಳಿದನು. ಶಿಷ್ಯನು ಕೇಳಿದಂತೆ ಆಶೀರ್ವಾದ ಪೂರ್ವಕವಾಗಿ ಮೃತ್ತಿಕೆಯನ್ನು ಕೊಟ್ಟರು. ಅನುಗೃಹಿತನಾದೆ ಎಂದು ನುಡಿದು ಮೃತ್ತಿಕೆಯನ್ನು ಮಂತ್ರಾಕ್ಷತೆಯನ್ನು ತೆಗೆದುಕೊಂಡು ತನ್ನ ಗ್ರಾಮಕ್ಕೆ ಹೊರಟನು. ರಾತ್ರಿಯಾದ ಕಾರಣ ಅವನು ಒಂದು ಗ್ರಾಮದಲ್ಲಿ ತಂಗಿದನು. ಆ ಊರಿನ ಶ್ರೀಮಂತ ದೇಶಪಾಂಡೆಯವರ ಮನೆಯ ಮುಂಭಾಗದ ಕಟ್ಟೆಯ ಮೇಲೆ ಮಲಗಿದನು. ಆಗ ಒಂದು
ಪಿಶಾಚಿಯು, ಹಿಂದೆ ಎರಡು ಬಾರಿ ಆ ಮನೆಯಲ್ಲಿ ಹುಟ್ಟಿದ ಮಕ್ಕಳನ್ನು ಅಪಹರಿಸಿಕೊಂಡು ಹೋಗಿತ್ತು. ಅದರಂತೆ ಈ ಬಾರಿಯೂ ದೇಶಪಾಂಡೆಯವರ ಮನೆಗೆ ಬಂದಿತು. ಆ ಮನೆಯ ಮುಂಭಾಗದಲ್ಲಿ ಮಲಗಿದ ಶ್ರೀ ಗುರುರಾಯರ ಶಿಷ್ಯರನ್ನು ದಾಟಿ ಒಳಹೋಗಲು ಅಸಾಧ್ಯವಾಗಯಿತು. ನೀನು ಹೊದ್ದಿಕೊಂಡಿರುವ ಆ ವಸ್ತ್ರವನ್ನು ತೆಗೆದುಹಾಕು, ನನಗೆ ಒಳಗೆ ಹೋಗಲು ದಾರಿ ಕೊಡು ಎಂದು ಪಿಶಾಚಿಯು ಕಿರುಚಾಡಲು ಆರಂಭಿಸಿತು. ಆಗ ಮನೆಯವರೆಲ್ಲರೂ ಅಲ್ಲಿ ಸೇರಿದರು. ನಮ್ಮ ಎರಡೂ ಕಂದಮ್ಮಗಳನ್ನು ಒಯ್ದ ಈ ಪಿಶಾಚಿಯು ಹುಟ್ಟಿದ ಈ ಹಸುಗೂಸನ್ನು ತೆಗೆದುಕೊಂಡು ಹೋಗಲು ಬಂದಿರುವುದು ಎಂದು ತಿಳಿದರು. ಆದರೆ, ಈ ಪಿಶಾಚಿಗೆ ಒಳಗೆ ಬರಲಾಗದಿರುವುದಕ್ಕೆ ಕಾರಣವೇನು ಎಂಬುವುದು ಅವರಿಗೆ ಪ್ರಶ್ನೆ
ಆಗಿತ್ತು. ಆ ಯಜಮಾನರು ದೂರದಲ್ಲಿ ನಿಂತ ಶ್ರೀ ರಾಯರ ಶಿಷ್ಯನನ್ನು ತಾವು ಯಾರೆಂದು ಕೇಳಿದರು. ನಾನು ಶ್ರೀ ಗುರುರಾಯರ ಶಿಷ್ಯ ನನ್ನ ವಿವಾಹವು ಕೆಲವೇ ದಿನಗಳಲ್ಲಿ ಇರುವುದು. ಅದಕ್ಕಾಗಿ ಗುರುಗಳಿಂದ ಮೃತ್ತಿಕೆಯನ್ನು ಪಡೆದು ನಮ್ಮ ಊರಿಗೆ ಹೊರಟಿದ್ದೆ. ತಡರಾತ್ರಿ ಆಗಿದ್ದರಿಂದ ತಮ್ಮ ಮನೆಯ ಜಗಳಿ ಕಟ್ಟೆಯ ಮೇಲೆ ನಿದ್ರಿಸಿದೆ. ಆಗ ಆ ಪಿಶಾಚಿಯು ಮೃತ್ತಿಕೆಯ ಗಂಟಿನಿಂದ ಕೂಡಿದ ವಸ್ತ್ರವನ್ನು ಸರಿಸು ನಾನು ಒಳಗೆ ಹೋಗಬೇಕೆಂದು ಕೂಗತೊಡಗಿತು. ಅದು ಒಳಗೆ ಹೋಗಬಾರದೆಂದು ವಸ್ತ್ರವನ್ನು ಹಿಡಿದು ಮನೆಯ ದ್ವಾರದ ಮುಂದೆ ನಿಂತೆ ಎಂದು ಹೇಳಿದನು. ಅದರಂತೆ ಆ ಶಿಷ್ಯರು ವಸ್ತ್ರದ ಗಂಟಿನಲ್ಲಿದ್ದ ಮೃತ್ತಿಕೆಯನ್ನು ಪಿಶಾಚಿಯ ಮೇಲೆ ಹಾಕಿದರು. ಭಯಗ್ರಸ್ಥ ಆ ಪಿಶಾಚಿಯು ನನ್ನನ್ನು ಬಿಟ್ಟುಬಿಡಿ ಮತ್ತೊಮ್ಮೆ ಇಲ್ಲಿಗೆ ಬರುವುದಿಲ್ಲವೆಂದು ಹೇಳಿ ಹೊರಟುಹೋಯಿತು. ಮನೆಯವರೆಲ್ಲರೂ ಸಂತೋಷಗೊಂಡು ಅವರ ವಿವಾಹದ ಖರ್ಚನ್ನು ತಾವೇ ತೆಗೆದುಕೊಂಡರು. ವೈಭವದಿಂದ ವಿವಾಹ ಮಾಡಿಸಿದರು. ಶ್ರೀ ಗುರುರಾಯರಿಂದ ಆ ಶಿಷ್ಯನು ಹಣವನ್ನು ಪಡೆದಿದ್ದರೆ ಹಣ ಮಾತ್ರ ಅವನದಾಗುತ್ತಿತ್ತು. ರಾಯರಲ್ಲಿ ಶ್ರದ್ಧೆಯಿಂದ ಮಾಡಿದ ಸೇವೆಯಿಂದ ಗೌರವವೂ ದೊರೆಕಿತು. ಹಣವೂ ದೊರಕಿತು.ಮೃತ್ತಿಕೆಯ ಮಹಿಮೆಯೂ ಜಗತ್ತಿಗೆ ತಿಳಿಯಿತು.

ಐತಿಹಾಸಿಕ ನಗರ ಕೋಟೆ ನಾಡು ಚಿತ್ರದುರ್ಗಕ್ಕೆ ಶ್ರೀರಾಯರು ಆಗಮಿಸಿದಾಗ ಅವರ ಸಮೀಪದಲ್ಲೇ ಸೇವೆಯನ್ನು ಮಾಡಿಕೊಂಡಿದ್ದ ನೀರಿನ ವೆಂಕಣ್ಣನೆಂಬ ಭಕ್ತನು ನನ್ನನ್ನು ಮುಕ್ತಿಗೊಳಿಸಿದರೆಂದು ರಾಯರನ್ನು ಪ್ರಾರ್ಥಿಸಿದನು. ತಮ್ಮ ತಪಃ ಶಕ್ತಿಯಿಂದ ಅವನಿಗೆ  ಮುಕ್ತಿಯನ್ನು  ಕರುಣಿಸಿದರು. ಇಂದಿಗೂ ಈ ಐತಿಹಾಸಿಕ ಸ್ಮಾರಕವು ಐತಿಹಾಸಿಕ ನಗರದಲ್ಲಿ ಕಾಣಸಿಗುವುದು.

ಬಾಕ್ಸ್*ಆಡುಮುಟ್ಟದ ಸೊಪ್ಪಿಲ್ಲ; ಗುರು ರಾಯರು ಮುಟ್ಟದ ಗ್ರಂಥಗಳಿಲ್ಲ

ಶ್ರೀ ಗುರುರಾಯರ ವಾಜ್ಞಮಯ ಸೇವೆಯಂತೂ ಅಪಾರವಾಗಿದೆ. ವೇದ,  ಪುರಾಣ ಸೂತ್ರ, ಭಾಷ್ಯ, ಟೀಕಾ ಟಿಪ್ಪಣಿ ರೂಪವಾದ ಎಲ್ಲಾ ಗ್ರಂಥಗಳ  ವ್ಯಾಖ್ಯಾನವನ್ನು ಮಾಡಿರುವರು.
ಇವರು 60ಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿರುವರು. ಭಕ್ತರಿಗೆ ಪಾರಾಯಣ ಮಾಡಲು ಅನೇಕ ಸ್ತೋತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಆದ್ದರಿಂದ “ಆಡು ಮುಟ್ಟದ ಸೊಪ್ಪಿಲ್ಲ” ಶ್ರೀಗುರುರಾಯರು ಮುಟ್ಟದ ಗ್ರಂಥಗಳಿಲ್ಲ” ಎಂಬ ವಾಡಿಕೆಯೂ ಉಂಟು. ಈ ಮೂಲಕ ವ್ಯಾಸ ಸಾಹಿತ್ಯವನ್ನು ಜಗತ್ತಿನ ತುಂಬಾ ಪ್ರಚಾರವಾಗುವಂತೆ ಮಾಡಿದವರು ಇವರು. ಹಾಗೆಯೇ ಶ್ರೀ ವೇಣುಗೋಪಾಲ ಎಂಬ  ಅಂಕಿತದಿಂದ ಅನೇಕ ಕನ್ನಡ ಪದ್ಯಗಳನ್ನು ರಚಿಸಿ, ದಾಸ ಸಾಹಿತ್ಯದ ಮೂಲಕ ತತ್ವ ಪ್ರಸಾರವನ್ನು ಮಾಡಿದರು. ವಿಶ್ವಗುರುಗಳೆಂದೂ ಪ್ರಖ್ಯಾತಿ ಪಡೆದರು. ಶ್ರೀ ಪ್ರಹ್ಲಾದ ರಾಜರು ಯಜ್ಞ ಮಾಡಿದ ಪವಿತ್ರ ಭೂಮಿಯಾದ ಮಂಚಾಲಮ್ಮನ ಪವಿತ್ರ ಕ್ಷೇತ್ರವಾದ, ತುಂಗಾ ಭದ್ರಾನದಿ ದಡದ ಪವಿತ್ರ ಮಂತ್ರಾಲಯ ಕ್ಷೇತ್ರದಲ್ಲಿ ಶ್ರಾವಣ ಕೃಷ್ಣ ದ್ವಿತೀಯ ಶುಕ್ರವಾರ 23 ಜುಲೈ 1671ರಂದು ಸಶರೀರವಾಗಿ ವೃಂದಾವನ ಪ್ರವೇಶಿಸಿದರು. ಇಂದಿಗೂ ತಮ್ಮಲ್ಲಿಗೆ ಬರುವ ಭಕ್ತರಿಗೆ ಅನುಗ್ರಹಿಸುತ್ತಿರುವರು.

ಪ್ರಭಂಜನಾಚಾರ್ಯ ಉಪಾಧ್ಯಾಯ,
ಸಂಸ್ಕೃತ ವಿದ್ವಾಂಸರು,
ವ್ಯವಸ್ಥಾಪಕರು, ಉತ್ತರಾದಿ ಮಠ,
ಚಿತ್ರದುರ್ಗ, ಮೊ.ನಂ: 9480410950

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!