ಬೆಂಗಳೂರು: ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಕಾಂಗ್ರೆಸ್ ಸರ್ಕಾರಗಳ ಗ್ಯಾರಂಟಿ ಯೋಜನೆಗಳನ್ನು ಯಾವಾಗ ಜಾರಿಗೆ ತರುತ್ತಾರೆ ಎಂದು ಜನ ಕಾಯುತ್ತಿದ್ದಾರೆ. ಆ ಯೋಜನೆಗಳ ಜಾರಿ ವಿಚಾರಕ್ಕೇನೆ ಇಂದು ಸಿಎಂ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿದೆ.
ಮಧ್ಯಾಹ್ನದ ಹೊತ್ತಿಗೆ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಚಿವರುಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಸಿಎಂ ಸೇರಿದಂತೆ ಎಲ್ಲಾ ಸಚಿವರು ಗ್ಯಾರಂಟಿಗಳ ಜಾರಿ ಆಗೋದು ಗ್ಯಾರಂಟಿ ಎಂದೇ ಹೇಳಿದ್ದಾರೆ.
ಸಭೆಗೂ ಮುನ್ನ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಯಾವುದೇ ಯೋಜನೆಗಳು ಜಾರಿಗೆ ತರಬೇಕು ಅಂದ್ರೆ ಮಾನದಂಡ ಅನುಸರಿಸಲೇಬೇಕಾಗುತ್ತದೆ. ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರದ ಯೋಜನೆಯಾಗಲಿ ಅದಕ್ಕೆ ಮಾನದಂಡ ಅಪ್ಲೈ ಆಗಿಯೇ ಆಗುತ್ತೆ. ಇದು ಜನರ ತೆರಿಗೆ ಹಣವಾಗಿದೆ. ಅದರಲ್ಲಿ ಒಂದು ರೂಪಾಯಿ ಖರ್ಚು ಮಾಡಬೇಕಾದಾಗ ಅದಕ್ಕೆ ಆದಂತ ಮಾನದಂಡಗಳನ್ನು ಗಮನಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಕಂಡೀಷನ್ ಇಲ್ಲದೆ ಯಾವುದೇ ಯೋಜನೆಯನ್ನಾದರೂ ಜಾರಿಗೆ ತಂದಿದೆಯಾ. ಮಾನದಂಡವಿಲ್ಲದೆ ಯಾವ ಯೋಜನೆಯನ್ನು ಜಾರಿಗೆ ಸಾಧ್ಯವಿಲ್ಲ. ಆದರೆ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.