ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, (ಜೂ.26) : ಕೇವಲ ಅಡುಗೆ ಮನೆಗಷ್ಠೆ ಸೀಮಿತವಾಗಿರುವ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಇಲ್ಲಿನ ಮಹಿಳಾ ಸೇವಾ ಸಮಾಜದ 94 ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
94 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಮಹಿಳೆಯರು ಒಂದು ಕಡೆ ಕುಳಿತು ತಮ್ಮ ಕಷ್ಠ-ಸುಖಗಳನ್ನು ಹಂಚಿಕೊಳ್ಳುವುದಕ್ಕಾಗಿ ಉಚಿತವಾಗಿ ಜಾಗ ನೀಡಿದ್ದಾರೆಂದರೆ ಅವರಲ್ಲಿ ಎಂತಹ ದೂರ ದೃಷ್ಟಿಯಿತ್ತು ಎನ್ನುವುದು ಗೊತ್ತಾಗುತ್ತದೆ. ಇಂದಿನ ಕಾಲದಲ್ಲಿ ಬಹಳ ವರ್ಷಗಳ ಕಾಲ ಯಾವುದೇ ಒಂದು ಸಂಘ ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಮಹಿಳಾ ಸೇವಾ ಸಮಾಜ 94 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಕಡಿಮೆ ಸಾಧನೆಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹತ್ತು ಸಾವಿರದ 200 ಸ್ವಸಹಾಯ ಸಂಘಗಳಿವೆ. ಒಂದು ಲಕ್ಷ 35 ಸಾವಿರ ಕುಟುಂಬಗಳು ಸ್ವಸಹಾಯ ಸಂಘದಲ್ಲಿವೆ. ಸದಸ್ಯರುಗಳಿಗೆ ಸಾಲ ನೀಡುವುದಕ್ಕಾಗಿ 60 ಸಾವಿರ ಕೋಟಿ ರೂ.ಗಳನ್ನು ಇಡಲಾಗಿದೆ. ಒಂದು ಮನೆಯಲ್ಲಿ ಅತ್ತೆ ಸೊಸೆ ಜಗಳವಾಡುವುದಿರಲಿ. ಅಕ್ಕ-ತಂಗಿಯರೆ ಜಗಳವಾಡುತ್ತಾರೆ. ಜಗಳ ಇರಬೇಕು. ಆದರೆ ಸಂಬಂಧ, ವ್ಯವಹಾರ ಕಿತ್ತುಹೋಗುವ ಹಂತಕ್ಕೆ ತಲುಪಬಾರದು. ಮಹಿಳಾ ಸಮಾಜದಲ್ಲಿನ ಖರ್ಚು-ವೆಚ್ಚಗಳನ್ನು ಪ್ರಶ್ನಿಸುವಂತಾಗಬೇಕು. ಎಂದು ಮಹಿಳಾ ಸೇವಾ ಸಮಾಜದ ಸದಸ್ಯರಿಗೆ ಕರೆ ನೀಡಿದರು.
ಯಾವುದೇ ಒಂದು ಕಾರ್ಯಚಟುವಟಿಕೆ ನಿರಂತವಾಗಿ ನಡೆಯಬೇಕಾದರೆ ಇಂತಹ ಕಾರ್ಯಕ್ರಮಗಳು ಬೇಕು. ಮಹಿಳೆ ಆರ್ಥಿಕವಾಗಿ ಸದೃಢಳಾಗುವುದರ ಜೊತೆಗೆ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆ ಶಿಕ್ಷಣವಂತಳಾಗಬೇಕು. ಒಂದು ಕಾಲದಲ್ಲಿ ಮಹಿಳೆಯ ಹೆಸರಿನಲ್ಲಿ ಆಸ್ತಿಯಾಗಲಿ, ಬ್ಯಾಂಕ್ ಖಾತೆ ಇವುಗಳ್ಯಾವು ಇರುತ್ತಿರಲಿಲ್ಲ.
ಹದಿನೈದು ಇಪ್ಪತ್ತು ವರ್ಷಗಳಿಂದ ಸ್ವಸಹಾಯ ಸಂಘಗಳ ಮೂಲಕ ಮಹಿಳೆ ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಹಣಕಾಸಿನ ವ್ಯವಹಾರ ನಡೆಸುವಂತಾಗಿದ್ದಾಳೆ. ಬಡತನದಿಂದ ಮಹಿಳೆಯನ್ನು ದೂರವಿರಿಸಬೇಕಾಗಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ.
ರುಡ್‍ಸೆಟ್‍ನಲ್ಲಿ ತರಬೇತಿ ಪಡೆದಿರುವ ಅನೇಕ ಮಹಿಳೆಯರಲ್ಲಿ 94 ಮಹಿಳೆಯರು ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವಾಹನಗಳ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಮನೆಯ ಜೊತೆ ಹೊರಗಿನ ಪ್ರಪಂಚದ ಜ್ಞಾನವಿದ್ದಾಗ ಮಾತ್ರ ಮಹಿಳೆ ಸಮಾಜದಲ್ಲಿ ಮತ್ತೊಬ್ಬರನ್ನು ಗೌರವದಿಂದ ಕಾಣುವ ಸಂಸ್ಕøತಿ ಕಲಿಯುತ್ತಾಳೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಭಾರತಿ ಬಣಕಾರ್ ಮಾತನಾಡಿ ಒಂದು ಕಾಲದಲ್ಲಿ ಮಹಿಳೆಗೆ ಶಿಕ್ಷಣ ಹಾಗೂ ಹಣಕಾಸಿನ ಸ್ವಾತಂತ್ರ್ಯವಿರಲಿಲ್ಲ. ಈಗ ಎಲ್ಲಾ ರಂಗಗಳಲ್ಲಿ ವಿಪುಲ ಉದ್ಯೋಗಾವಕಾಶಗಳಿರುವುದರಿಂದ ಮಹಿಳೆ ಆರ್ಥಿಕವಾಗಿ ದಿನದಿಂದ ದಿನೆ ಸದೃಢವಾಗುತ್ತಿದ್ದಾಳೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದರ ಜೊತೆ ಚಲನವಲನಗಳ ಕಡೆ ಹೆಚ್ಚಿನ ನಿಗಾ ಇಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಶ್ರೀಮತಿ ಲತ ಉಮೇಶ್ ವಾರ್ಷಿಕ ವರದಿ ಮಂಡಿಸಿದರು.
ಶ್ರೀಮತಿ ವೀಣ ವಿಜಯ ವೇದಿಕೆಯಲ್ಲಿದ್ದರು.
ಭಾರತಿ ಸುರೇಶ್ ಪ್ರಾರ್ಥಿಸಿದರು. ಶ್ರೀಮತಿ ನಾಗರತ್ನ ವಿಶ್ವನಾಥಯ್ಯ ಸ್ವಾಗತಿಸಿದರು.
ಮಹಿಳಾ ಸೇವಾ ಸಮಾಜದ ಸದಸ್ಯರು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.