ಮಂಡ್ಯ: ವರ್ತೂರು ಸಂತೋಷ್ ಹೆಚ್ಚು ಖ್ಯಾತಿ ಪಡೆದಿದ್ದೆ ಹಳ್ಳಿಕಾರ್ ತಳಿಗಳ ನಿರ್ವಹಣೆ ಮಾಡುತ್ತಿದ್ದೀನಿ ಅಂತ. ಹಳ್ಳಿಕಾರ್ ಒಡೆಯ ಎಂಬ ನೇಮ್ ಪ್ಲೇಟ್ ಕೂಡ ಹಾಕಿಕೊಂಡಿದ್ದಾರೆ. ಇದರಿಂದಾನೇ ಬಿಗ್ ಬಾಸ್ ಮನೆಗೂ ಹೋಗಿ ಬಂದಿದ್ದಾರೆ. ಆದರೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೂ ಕ್ರೇಜ್ ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಹಳ್ಳಿಕಾರ್ ಒಡೆಯ ಎನಿಸಿಕೊಳ್ಳುತ್ತಿರುವ ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ಕೋಪಗೊಂಡಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಕಾನೂನು ಸಮರಕ್ಕೆ ನಿಂತಿರುವ ಹಳ್ಳಿಕಾರ್ ಸಂರಕ್ಷಕರು ಇವರಿಂದ ಹಳ್ಳಿಕಾರ್ ಜಾನಾಂಗಕ್ಕೆ ಅಪಮಾನವಾಗಿದೆ ಎಂದಿದ್ದಾರೆ. ಹಳ್ಳಿಕಾರ್ ಒಡೆಯ ಅಂತ ಕರೆಸಿಕೊಳ್ಳುತ್ತಿರುವುದು ಸರಿಯಲ್ಲ. ಆ ರೀತಿ ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ತಲಾತಲಾಂತರದಿಂದ ಹಳ್ಳಿಕಾರ್ ಸಂರಕ್ಷಣೆ ಮಾಡುತ್ತಿರುವ ರೈತರ ಭಾವನೆಗಳಿಗೆ ಇದು ಧಕ್ಕೆ ಉಂಟು ಮಾಡುತ್ತದೆ. ಇದರಿಂದ ಅವಮಾನವಾಗಿದೆ. ಅಷ್ಟೇ ಅಲ್ಲ ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನೆಯಾಗಲಿದೆ. ಗೂಗಲ್ ನಲ್ಲಿ ಕೂಡ ಛೇರ್ ಮೆನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಸರ್ವೇಶನ್ ಎಂಬ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಎಲ್ಲಾ ದಾಖಲಾತಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ನಂತರ ಕಾನೂನು ಹೋರಾಟ ಮಾಡುತ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ಎಚ್ಚರಿಸಿದ್ದಾರೆ.
ಈ ಹಿಂದೆಯೇ ಹಳ್ಳಿಕಾರ್ ಸಂರಕ್ಷಕರು ವರ್ತೂರು ಸಂತೋಷ್ ಅವರ ಬೆಂಬಲಿಗರಿಗೆ ತಿಳುವಳಿಕೆ ಹೇಳಲು ಪ್ರಯತ್ನ ನಡೆಸಿದ್ದರು. ಸುದ್ದಿಗೋಷ್ಟಿ ನಡೆಸಿ ವಿಷಯ ಮುಟ್ಟಿಸಿದ್ದರು. ಆದರೆ ಆ ಸಮಯದಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಏಕವಚನದಲ್ಲಿಯೇ ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಹರಿಹಾಯ್ದಿದ್ದರು.