ತುಮಕೂರು: ಬಿಜೆಪಿಯಲ್ಲಿರುವ ವಿ ಸೋಮಣ್ಣ ಅವರಲ್ಲಿ ಅಸಮಾಧಾನದ ಬೆಂಕಿ ಆಗಾಗ ಹೊಗೆಯಾಡುತ್ತಲೆ ಇರುತ್ತದೆ. ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಬೇಡದ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ, ಸೋಮಣ್ಣ ಅವರ ಅಸಮಾಧಾನಕ್ಕೆ ಬಿಜೆಪಿ ಗುರಿಯಾಗಿತ್ತು. ಇದಾದ ಮೇಲೆ ಸೋಮಣ್ಣ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತಿತ್ತು. ಬಿಜೆಪಿ ನಾಯಕರು ಮನಸ್ತಾಪ ಸರಿ ಮಾಡುವುದಕ್ಕೆ ನೋಡಿದರೂ, ಅದು ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದೆ. ಇದೀಗ ಹೈಕಮಾಂಡ್ ನಿಂದ ಮತ್ತೆ ಕರೆ ಬಂದಿದೆಯಂತೆ.
ತುಮಕೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸೋಮಣ್ಣ ಅವರು ಹೈಕಮಾಂಡ್ ಕರೆ ಬಗ್ಗೆ ಮಾತನಾಡಿ, ನಿನ್ನೆ ವಿಜಯಪುರಕ್ಕೆ ಹೊರಟಿದ್ದಾಗ ಹೈಕಮಾಂಡ್ ನಿಂದ ಕರೆ ಬಂತು. ತುರ್ತಾಗಿ ಬರುವಂತೆ ಸೂಚನೆ ನೀಡಿದರು. ಆದರೆ ನಾನು ನಾಳೆ, ನಾಡಿದ್ದು ಬಿಟ್ಟು ಬರುತ್ತೇನೆ ಎಂದು ಹೇಳಿದ್ದೇನೆ. ಎರಡ್ಮೂರು ದಿನದಲ್ಲಿ ನನ್ನ ತಾಯಿಯ ಆರಾಧನೆ ಇದೆ. ಅದನ್ನು ಮುಗಿಸಿಕೊಂಡು ಹೋಗುತ್ತೇನೆ. ತಾಯಿ ಆರಾಧನೆ ಕಾರ್ಯಕ್ರಮ ಮುಗಿದ ದಿನ ರಾತ್ರಿ ಮತ್ತೆ ದೆಹಲಿಗೆ ಪೋನ್ ಮಾಡಿ ಡೇಟ್ ತೆಗೆದುಕೊಳ್ಳುತ್ತೇನೆ.
ನಾನು ಎಳೆ ಮಗುವಲ್ಲ. ಆರೇಳು ಜನ ಸಿಎಂ ಗಳ ಜೊತೆ ಕೆಲಸ ಮಾಡಿದ್ದೇನೆ. ನಲವತ್ತು ವರ್ಷ ರಾಜಕೀಯ ಅಧಿಕಾರಾವಧಿಯಲ್ಲಿ ನನ್ನ ವೈಯಕ್ತಿಕ ಬದುಕಿನಲ್ಲಿ ಯಾರೊಬ್ಬರು ಬೆಟ್ಟು ಮಾಡಿ ತೋರಿಸಿಲ್ಲ. ವಿಧಿ ಲಿಖಿತ ಏನಿದೇಯೋ ಹಾಗೇ ಆಗುತ್ತೆ. ಒಂದು ಸೂಚನೆಯೂ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದಿದ್ದಾರೆ.