ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸಿನಲ್ಲಿ ನಿನ್ನೆಯಷ್ಟೇ ಪರಿಶಿಷ್ಟ ಪಂಗಡ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಸರು ಜುಲೈ 18ರ ತನಕ ಬಿ.ನಾಗೇಂದ್ರ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ನ್ಯಾ.ಸಂತೋಷ್ ಗಜಾನನ ಭಟ್ ಅವರು ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ನಿನ್ನೆ ನಾಗೇಂದ್ರ ಅವರನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ನಂತರ ಸಂಪಿಗೆಹಳ್ಳಿಯಲ್ಲಿ ಇರುವ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಬಿ.ನಾಗೇಂದ್ರ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ನಡೆದದ್ದು ಸಣ್ಣ ಮಟ್ಟದ ಅಕ್ರಮ ಅಲ್ಲ. ಹತ್ತಿರತ್ತಿರ 187 ಕೋಟಿ ಹಣ ಅಕ್ರಮವಾಗಿ ಟ್ರಾನ್ಸಫರ್ ಆಗಿದೆ. ಅದರಲ್ಲೂ ಇಷ್ಟು ದೊಡ್ಡ ಮೊತ್ತದ ಹಣ ಹೋಗಿದ್ದು, ನನ್ನ ಗಮನಕ್ಕೆ ಬಂದಿಲ್ಲ ಅಂತ ನಾಗೇಂದ್ರ ಅವರು ಸ್ಟೇಟ್ಮೆಂಟ್ ಬೇರೆ ಕೊಟ್ಟಿದ್ದರು.
ನಿನ್ನೆ ಮೊನ್ನೆಯಿಂದ ಇಡಿ ಅಧಿಕಾರಿಗಳು ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲರ ಮನೆಯ ಮೇಲೂ ದಾಳಿ ನಡೆಸಿ, ಸಂಬಂಧ ಪಟ್ಟ ದಾಖಲೆಗಳು ಸಿಗಬಹುದಾ ಎಂದು ಜಾಲಾಡುತ್ತಿದ್ದಾರೆ. ಬಿ.ನಾಗೇಂದ್ರ ಅವರ ಮನೆ, ಕಚೇರಿ ಮೇಲೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಬಸನಗೌಡ ದದ್ದಲ್ ಅವರಿಗೆ ಸಂಬಂಧಿಸಿದ ಹಲವೆಡೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈಗ ನಾಗೇಂದ್ರ ಅವರು ಪೊಲೀಸರ ಕಸ್ಟಡಿಯಲ್ಲಿಯೇ ಇದ್ದು, ವಾಲ್ಮೀಮಿ ಅಭಿವೃದ್ದಿ ನಿಗಮದಲ್ಲಿ ನಾಪಾತ್ತೆಯಾದ ಹಣದ ತನಿಖೆಯೂ ನಡೆಯಲಿದೆ.