Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಲೋಕಸಭಾ ಕ್ಷೇತ್ರ : ಒಂದು ಹಿನ್ನೋಟ :1957 ರಿಂದ 2019 ರವರೆಗೂ ನಡೆದ ಚುನಾವಣೆಗಳ ಸಂಪೂರ್ಣ ಮಾಹಿತಿ…!

Facebook
Twitter
Telegram
WhatsApp

ಚಿತ್ರದುರ್ಗ ಮಾ. 17 : ಕೋಟೆಗಳ ನಾಡು ಎಂದೇ ಖ್ಯಾತಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು, ಇಂತಹ ಚಿತ್ರದುರ್ಗ ಜಿಲ್ಲೆಯಲ್ಲಿ 1952 ರಿಂದ 2019 ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ.  ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಬೇಸಿಗೆಯ ಬಿಸಿ ಏರುತ್ತಿರುವಂತೆಯೇ, ಚುನಾವಣಾ ಕಣ ರಂಗೇರುತ್ತಿದೆ.

 

ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಸದ್ಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳು ಅಲ್ಲದೆ, ನೆರೆಯ ತುಮಕೂರು ಜಿಲ್ಲೆಯ ಸಿರಾ ಹಾಗೂ  ಪಾವಗಡ ಸೇರಿದಂತೆ ಒಟ್ಟು 08 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷ- 919064, ಮಹಿಳೆ-922769, ಇತರೆ-104 ಸೇರಿದಂತೆ ಒಟ್ಟು 18,41,937 ಮತದಾರರಿದ್ದಾರೆ.  2019 ರಲ್ಲಿ ಜರುಗಿದ ಚುನಾವಣೆ ಸಂದರ್ಭದಲ್ಲಿ ಪುರುಷ- 889236, ಮಹಿಳೆ-870772, ಇತರೆ-103 ಸೇರಿದಂತೆ ಒಟ್ಟು 17,60,111 ಮತದಾರರಿದ್ದರು.

ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ 81886 ಹೆಚ್ಚು ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.  18 ವರ್ಷ ವಯಸ್ಸು ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಚುನಾವಣಾ ಆಯೋಗ ಉತ್ತೇಜನ ನೀಡಲು ಕೈಗೊಂಡ ಹಲವು ಕ್ರಮಗಳಿಂದಾಗಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಸಾಧ್ಯವಾಗಿದೆ.
ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ನಂತರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪುರುಷ- 125058, ಮಹಿಳೆ-124181, ಇತರೆ-13, ಒಟ್ಟು-230560 ಮತದಾರರು.

ಚಳ್ಳಕೆರೆ : ಪುರುಷ- 110448, ಮಹಿಳೆ-112106, ಇತರೆ-06, ಒಟ್ಟು-222560 ಮತದಾರರು.

ಚಿತ್ರದುರ್ಗ: ಪುರುಷ- 129809, ಮಹಿಳೆ-134398, ಇತರೆ-41, ಒಟ್ಟು-251312 ಮತದಾರರು.

ಹಿರಿಯೂರು: ಪುರುಷ- 121502, ಮಹಿಳೆ-124210, ಇತರೆ-16, ಒಟ್ಟು-233775 ಮತದಾರರು.

ಹೊಸದುರ್ಗ: ಪುರುಷ- 99860, ಮಹಿಳೆ-99596, ಇತರೆ-01, ಒಟ್ಟು-199457 ಮತದಾರರು.

ಹೊಳಲ್ಕೆರೆ : ಪುರುಷ- 118219, ಮಹಿಳೆ-118737, ಇತರೆ-10, ಒಟ್ಟು-236966 ಮತದಾರರು.

ತುಮಕೂರು ಜಿಲ್ಲೆಯ ಸಿರಾ -ಪುರುಷ- 113788, ಮಹಿಳೆ- 112898, ಇತರೆ-08, ಒಟ್ಟು- 226694 ಮತದಾರರು.  ಪಾವಗಡ -ಪುರುಷ-100380, ಮಹಿಳೆ-96643, ಒಟ್ಟು 197032 ಮತದಾರರಿದ್ದಾರೆ.

 

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ.

ಭಾರತ ದೇಶದ ಸ್ವಾತಂತ್ರ್ಯಾ ನಂತರ 1952 ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ನಿಜಲಿಂಗಪ್ಪ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) ಅಭ್ಯರ್ಥಿ ಜಿ. ಮರುಳಪ್ಪ ಅವರನ್ನು 79152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಹೆಚ್.ಎಸ್. ವೆಂಕಟಾಚಲಯ್ಯ ಅವರು 44211 ಮತಗಳನ್ನು ಗಳಿಸಿದ್ದರು.

1957 ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಶಿಯಲಿಸ್ಟ್ ಪಕ್ಷ (ಪಿಎಸ್‍ಪಿ) ದಿಂದ ಸ್ಪರ್ಧಿಸಿದ್ದ ಜೆ.ಎಂ. ಮಹ್ಮದ್ ಇಮಾಮ್ ಅವರು ಕಾಂಗ್ರೆಸ್ ಪಕ್ಷದ ಎಸ್. ರಂಗರಾವ್ ಅವರಿಗಿಂತ  11,159 ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು.

ಆದರೆ 1962 ರಲ್ಲಿ ನಡೆದ ಚುನಾವಣೆಯಲ್ಲಿ ಎಸ್. ವೀರಬಸಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾದ ಜಿ. ಬಸಪ್ಪ ಅವರನ್ನು  44849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಎಸ್. ವೀರಬಸಪ್ಪ ಅವರು 172673 ಮತಗಳನ್ನು ಗಳಿಸಿದರೆ, ಜಿ. ಬಸಪ್ಪ ಅವರು 127824 ಮತಗಳನ್ನು ಪಡೆದರು.  ಉಳಿದಂತೆ ಪಕ್ಷೇತರ ಅಭ್ಯರ್ಥಿ ಸಿ. ರಂಗಯ್ಯ ಅವರು ಕೇವಲ 16515 ಮತಗಳನ್ನು ಗಳಿಸಿದರು.
1967 ರ ಚುನಾವಣೆಯಲ್ಲಿ  ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಪುನಃ ಸ್ಪರ್ಧಿಸಿದ ಜೆ.ಎಂ. ಮಹ್ಮದ್ ಇಮಾಮ್ ಅವರು ಕಾಂಗ್ರೆಸ್‍ನ ಎಸ್. ವೀರಬಸಪ್ಪ  ಅವರಿಗಿಂತ  31932 ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾದರು, ಈ ಚುನಾವಣೆಯಲ್ಲಿ ಸಿ. ರಂಗಯ್ಯ ಹಾಗೂ ಪಿ.ಹೆಚ್. ಜಯದೇವಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

1971 ರ ಚುನಾವಣೆಯಲ್ಲಿ ಎನ್.ಪಿ.ಜೆ. ಪಕ್ಷದಿಂದ ಸ್ಪರ್ಧಿಸಿದ ಕೊಂಡಜ್ಜಿ ಬಸಪ್ಪ ಅವರು ಸ್ವತಂತ್ರ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ.ಎಂ. ಮಹ್ಮದ್ ಇಮಾಮ್ ಅವರನ್ನು 169702 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯಶಾಲಿಯಾದರು.  ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ರಂಗಯ್ಯ ಅವರು ಮೂರನೆ ಸ್ಥಾನ ಪಡೆದರು.

1977 ರ ಲೋಕಸಭಾ ಚುನಾವಣೆಯಲ್ಲಿ ಕೆ. ಮಲ್ಲಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಹೆಚ್.ಸಿ. ಬೋರಯ್ಯ ಅವರಿಗಿಂತ  86654 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು, ಪಕ್ಷೇತರ ಅಭ್ಯರ್ಥಿ ಚಂದ್ರಶೇಖರಯ್ಯ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟರು.

1980 ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ. ಮಲ್ಲಣ್ಣ ಅವರು  ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು  109361 ಮತಗಳಿಂದ ಸೋಲಿಸಿ ಎರಡನೆ ಬಾರಿ ಆಯ್ಕೆಯಾದರು, ಈ ಚುನಾವಣೆಯಲ್ಲಿ ಕಾಂಗ್ರೆಸ್(ಯು) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಸಿ. ಬೋರಯ್ಯ ಮೂರನೆ ಸ್ಥಾನ ಹಾಗೂ ಜನತಾ (ಎಸ್)ನ ಸಿ.ಆರ್. ಬಸಪ್ಪ ನಾಲ್ಕನೆ ಸ್ಥಾನ ಗಳಿಸಿದರು.

ಮತ್ತೆ 1984 ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಹೆಚ್. ರಂಗನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು  56811 ಮತಗಳಿಂದ ಪರಾಭವಗೊಳಿಸಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು.
1989 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಸಣ್ಣ ಚಿಕ್ಕಪ್ಪ ಅವರನ್ನು  142193 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದರು.  ಈ ಚುನಾವಣೆಯಲ್ಲಿ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು..

1991 ರ ಚುನಾವಣೆಯಲ್ಲಿ ಮತ್ತೆ ಸಿ.ಪಿ. ಮೂಡಲಗಿರಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಎಲ್.ಜಿ. ಹಾವನೂರು ಅವರನ್ನು  82512 ಮತಗಳ ಅಂತರದಿಂದ ಸೋಲಿಸಿ ಎರಡನೆ ಬಾರಿಗೆ ಆಯ್ಕೆಯಾದರು.  ಈ ಚುನಾವಣೆಯಲ್ಲಿ ಒಟ್ಟು 07 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ್ದ 1996 ರ ಚುನಾವಣೆಯಲ್ಲಿ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ. ಕೋದಂಡರಾಮಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು 19382 ಮತಗಳ ಅಂತರದಿಂದ ವಿಜಯಿಯಾದರು.  ಈ ಚುನಾವಣೆಯಲ್ಲಿ ಬರೋಬ್ಬರಿ 17 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು.

1998 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಅವರನ್ನು  58321 ಮತಗಳಿಂದ ಪರಾಭವಗೊಳಿಸಿ ಮೂರನೆ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

1999 ರ ಚುನಾವಣೆಯಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಕನ್ನಡ ಚಲನ ಚಿತ್ರರಂಗದ ನಟ ಶಶಿಕುಮಾರ್ ಅವರು ಜನತಾದಳ (ಯು) ಪಕ್ಷದಿಂದ ಸ್ಪರ್ಧಿಸಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು ಕೇವಲ 11178 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.

2004 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರು ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಅವರಿಗಿಂತ  37460 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.  ಈ ಚುನಾವಣೆಯಲ್ಲಿ ಒಟ್ಟು 06 ಅಭ್ಯರ್ಥಿಗಳು ಕಣದಲ್ಲಿದ್ದರು.

2009 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜನಾರ್ಧನಸ್ವಾಮಿ ಅವರು, ಕಾಂಗ್ರೆಸ್‍ನ ಬಿ. ತಿಪ್ಪೇಸ್ವಾಮಿ ಅವರಿಗಿಂತ 135656 ಮತಗಳ ಅಂತರದಿಂದ ಜಯಶಾಲಿಯಾದರು.  ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

2014 ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಂ. ಚಂದ್ರಪ್ಪ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಜನಾರ್ಧನಸ್ವಾಮಿ ಅವರನ್ನು 101291 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.  ಈ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಈ ಚುನಾವಣೆಯಲ್ಲಿ ನೋಟಾ ಗೆ ಒಟ್ಟು 8895 ಮತಗಳು ಚಲಾವಣೆಯಾಗಿದ್ದವು.
2019 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಎನ್. ಚಂದ್ರಪ್ಪ ಅವರಿಗಿಂತ 80,178 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.  ಈ ಚುನಾವಣೆಯಲ್ಲಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಚುನಾವಣೆಯಲ್ಲಿ ನೋಟಾಗೆ ಒಟ್ಟು 4368 ಮತಗಳು ಚಲಾವಣೆಯಾಗಿದ್ದವು.  ಚುನಾವಣೆಯಲ್ಲಿ ಶೇ. 70.64 ರಷ್ಟು ಮತದಾನವಾಗಿತ್ತು.
ಈ ಬಾರಿಯ ಚುನಾವಣೆಯು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಯಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಚಿತ್ರದುರ್ಗ ಜಿಲ್ಲಾ ಚುನಾವಣಾ ಅಧಿಕಾರಿ ಟಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಕೈಗೊಂಡಿದ್ದು, ಏ. 26 ರಂದು ಮತದಾನ ನಡೆಯಲಿದೆ.  ಎಲ್ಲ ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.  ಅಲ್ಲದೆ ಮತದಾನ ದಿನದಂದು ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

RCB ಸೇರ್ತಾರೆ ಅಂದುಕೊಂಡ್ರೆ ಕನ್ನಡಿಗ ರಾಹುಲ್ ಡೆಲ್ಲಿ ಪಾಲು..!

RCB ಕ್ರೇಜ್ ಎಷ್ಟಿದೆ‌ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಐಪಿಎಲ್ ಶುರುವಾಗುವ ಮುನ್ನವೇ ಆರ್ಸಿಬಿ ಫೀವರ್ ಅಭಿಮಾನಿಗಳಲ್ಲಿ ಜೋರಾಗಿ ಬಿಡುತ್ತದೆ. ಆರ್ಸಿಬಿ ಅಂದ್ರೆ ಅಷ್ಟು ಪ್ರೀತಿ ಕನ್ನಡಿಗರಿಗೆ. ಈಗ ಆರ್ಸಿಬಿ ಫ್ಯಾನ್ಸ್ ಖುಷಿ ಪಡೋ

error: Content is protected !!