ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಕಾನೂನಾತ್ಮಕವಾಗಿ ಮಾಡುತ್ತಿದ್ದೇವೆ. ಯಾರದ್ದೋ ಹೇಳಿಕೆ ಆಧರಿಸಿ ಆಗುವುದಿಲ್ಲ. ಹೀಗಾಗಿ ಸಭೆ ಮುಂದೂಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೋರ್ಟ್ ನಲ್ಲಿ ತಡೆಯಾಜ್ಞೆ ತೆರವು ಆಗಿದ್ದಕ್ಕೆ ಸಭೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಸದ ಯದುವೀರ್ ಒಡೆಯರ್ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2024 ಪ್ರಸ್ತುತ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್‌ನಲ್ಲಿ ಕಾನೂನು ಸವಾಲನ್ನು ಎದುರಿಸುತ್ತಿದೆ ಎಂಬುದನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮುಂದಿನ ಸೂಚನೆ ಬರುವವರೆಗೂ ಕಾಯಿದೆ ಜಾರಿ ಮಾಡಬಾರದು ಎಂದು ಮಧ್ಯಂತರ ಆದೇಶ ನೀಡಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಇಂದು ಸಭೆ ನಿಗದಿಯಾಗಿದೆ. 5ನೇ ಸೆಪ್ಟೆಂಬರ್ 2024 ರಂದು ಈ ವಿಷಯವನ್ನು ನ್ಯಾಯಾಂಗ ವಿಚಾರಣೆ ನಡೆಯಲಿದ್ದು ಕಾನೂನು ಪ್ರಕ್ರಿಯೆಯನ್ನು ಗೌರವಿಸಲು ಪ್ರಕ್ರಿಯೆಯನ್ನು ಗೌರವಿಸಲು ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಕಾನೂನನ್ನು ಎತ್ತಿಹಿಡಿಯುವಲ್ಲಿ ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ದೃಢವಾಗಿ ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರಕ್ಕೆ ರಾಜಮಾತೆ ಪ್ರಮೋದಾ ದೇವಿ ಅವರು ಪ್ರತಿಕ್ರಿಯೆ ನೀಡಿದ್ದು, ಸಭೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ವಿರುದ್ಧ ಸಭೆ ನಡೆಸುತ್ತಿರುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಆಗಲಿದೆ. ಸೆಪ್ಟೆಂಬರ್ 5ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹೀಗಿರುವಾಗ ಮೊದಲೇ ಸಭೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.