ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಸೋಲಿಸಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಅಮೆರಿಕ ಪ್ರವಾಸದಲ್ಲಿರುವ ಅವರು ವಾಷಿಂಗ್ಟನ್ ನ ನ್ಯಾಷನಲ್ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಚೆನ್ನಾಗಿರುತ್ತದೆ. ಜನರಲ್ಲಿ ಅಚ್ಚರಿ ಮೂಡಿಸುತ್ತದೆ ಎಂಬ ಭಾವನೆ ನನಗಿದೆ. ಬರೀ ಸಂಖ್ಯಾಬಲವಲ್ಲ ವಿರೋಧ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಒಂದು ವರ್ಷದೊಳಗೆ ಲೋಕಸಭೆ ಚುನಾವಣೆ ನಡೆಯಲಿದ್ದು, ಮೈತ್ರಿ ಮಾಡಿಕೊಳ್ಳಲು ವಿರೋಧ ಪಕ್ಷಗಳೊಂದಿಗೆ ಕಾಂಗ್ರೆಸ್ ಸಮಾಲೋಚನೆ ನಡೆಸುತ್ತಿದೆ.
ವಿಪಕ್ಷಗಳ ನಡುವೆ ಒಗ್ಗಟ್ಟು ಮೂಡುತ್ತಿದ್ದು, ಎಲ್ಲ ಪ್ರತಿಪಕ್ಷಗಳೊಂದಿಗೆ (ಪಕ್ಷಗಳ) ಚರ್ಚೆ ನಡೆಸುತ್ತಿದ್ದೇವೆ. ಈ ವಿಚಾರದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ. ಪ್ರತಿಪಕ್ಷಗಳ ನಡುವಿನ ಪೈಪೋಟಿ ಮತ್ತು ಅಂತರ ಇರುವುದರಿಂದ, ಏನೇ ವ್ಯತ್ಯಾಸಗಳು ಬಂದರೂ ಬಿಜೆಪಿ ಯನ್ನು ಎದುರಿಸಲು ನಮ್ಮ ನಮ್ಮಲ್ಲಿಯೇ ಒಂದಿಷ್ಟು ರಾಜಿ ಮಾಡಿಕೊಳ್ಳಬೇಕು. ಇದೇ ವೇಳೆ ಕೇಂದ್ರದ ಬಿಜೆಪಿ ಸರ್ಕಾರವನ್ನು ರಾಹುಲ್ ಗಾಂಧಿ ಟೀಕಿಸಿದರು. ವಿರೋಧ ಪಕ್ಷದ ನಾಯಕರುಗಳ ಮೇಲೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಂತರ ಸಂಸತ್ತಿನ ಸದಸ್ಯತ್ವವನ್ನು ಕಳೆದುಕೊಂಡಿರುವ ಬಗ್ಗೆಯೂ ರಾಹುಲ್ ಮಾತನಾಡಿದರು. ಅದರಿಂದ ನನಗೆ ಒಳ್ಳೆಯದೇ ಆಯಿತು ಎಂದು ಹೇಳಿದರು. ಹೀಗೆ ನಾನು ಅನರ್ಹನಾಗುತ್ತೇನೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಅವರು ಈ ರೀತಿ ಮಾಡುತ್ತಾರೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಹೇಳಿದರು. ಆದರೆ, ಇದರಿಂದ ಒಳ್ಳೆಯದಾಯಿತು. ಈ ಮೂಲಕ ಜನಸೇವೆ ಮಾಡುವ ದೊಡ್ಡ ಅವಕಾಶ ಸಿಕ್ಕಿದೆ ಎಂದರು.