ಬೆಂಗಳೂರು: 2020 ರಲ್ಲಿ ಶ್ರೀ ಕೃಷ್ಣನ ಬಂಧನವಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವನ ದುಷ್ಕೃತ್ಯಗಳನ್ನು ಬಯಲಿಗೆಳೆದಿದ್ದು, ಆತನನ್ನು ಬಂಧಿಸಲಾಯ್ತು. ಆತ, ಮನಿ ಲಾಂಡರಿಂಗ್, ಹ್ಯಾಕಿಂಗ್, ಡ್ರಗ್ ಕೇಸ್ನಲ್ಲಿ ಶಾಮೀಲಾಗಿದ್ದಾನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹೇಳಿದರು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, 2021 ರ ಮಾರ್ಚ್ 3 ರಂದು ನಾವು ಇಡಿಗೆ ಮನಿ ಲಾಂಡರಿಂಗ್ ಕೇಸ್ ಶಿಫಾರಸು ಮಾಡಿದ್ದೇವೆ. ತನಿಖೆ ನಡೀತಿದ್ದು, ನಮ್ಮ ಪೋರ್ಟಲ್ ಸಹ ಆತ ಹ್ಯಾಕ್ ಮಾಡಿದ್ದ. ಇದನ್ನ ಸಿಐಡಿ ತನಿಖೆ ಮಾಡುತ್ತಿದೆ. ಏಪ್ರಿಲ್ 28 ರಂದು ಸಿಬಿಐನ ಇಂಟರ್ ಪೋಲ್ ಬ್ರಾಂಚ್ಗೂ ಕೇಸ್ ತನಿಖೆಗೆ ಶಿಫಾರಸು ಮಾಡಿದ್ದೇವೆ. ಸರ್ಕಾರ ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ ಎನ್ನುವ ಕುರಿತು ಸ್ಪಷ್ಟೀಕರಣ ನೀಡಿದರು.
ಇನ್ನೂ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಹಾವಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಒಂದು ವಾರದಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಒಂದು ವಾರದ ಬಳಿಕ ನಗರ ಸಂಚಾರ ಮಾಡಿ ಆ ಬಗ್ಗೆ ಅವಲೋಕನ ಮಾಡುತ್ತೇನೆ ಎಂದರು.
ದೀಪಾವಳಿ ಗೈಡ್ಲೈನ್ಸ್ ಬಗ್ಗೆ ಸುಪ್ರೀಂಕೋರ್ಟ್ ಆದೇಶವಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ರು.