ವರದಿ ಮತ್ತು ಫೋಟೋಗಳು : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಪ್ರವಾದಿ ಮಹಮದ್ ಪೈಗಂಬರ್‍ರವರ ಹುಟ್ಟುಹಬ್ಬ ಈದ್‍ಮಿಲಾದನ್ನು ಮಂಗಳವಾರ ನಗರದಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಬಡಾಮಕಾನ್‍ನಿಂದ ಮಧ್ಯಾಹ್ನ ಹೊರಟ ಮೆರವಣಿಗೆ ಬಸವೇಶ್ವರ ಟಾಕೀಸ್ ಮುಂಭಾಗದ ರಸ್ತೆಯಿಂದ ಎಸ್.ಬಿ.ಎಂ.ಸರ್ಕಲ್, ಮುಖ್ಯ ರಸ್ತೆಯ ಮೂಲಕ ಕನಕವೃತ್ತ, ಮಕ್ಕ ಮಸೀದಿ, ನೆಹರುನಗರದಲ್ಲಿ ಸಾಗಿ ನಂತರ ಸಂಜೆ ಜಾಮಿಯಾ ಮಸೀದಿಗೆ ಹಿಂದಿರುಗಿತು.
ಮೆರವಣಿಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಮುಸ್ಲಿಂ ಬಾಂಧವರು ಹಸಿರು ಹಾಗೂ ಬಿಳಿ ಬಣ್ಣದ ಬಾವುಟಗಳನ್ನು ಹಿಡಿದು ಹರ್ಷೋದ್ದಾರಗಳನ್ನು ಕೂಗುತ್ತ ಸಾಗಿದರು. ಜಟಕಾ ಬಂಡಿ ಹಾಗೂ ಎತ್ತಿನ ಬಂಡಿಗಳಲ್ಲಿ ಕುಳಿತು ಕೆಲವರು ಮೆರವಣಗೆಯಲ್ಲಿ ಸಾಗಿದರೆ. ಒಂದೊಂದು ಬೈಕ್‍ನಲ್ಲಿ ಮೂರ್ನಾಲ್ಕು ಯುವಕರು ಕುಳಿತು ನಗರದೆಲ್ಲೆಡೆ ಸಂಚರಿಸಿ ಈದ್‍ಮಿಲಾದ್ ಹಬ್ಬವನ್ನು ಆಚರಿಸಿದ್ದು ಕಂಡು ಬಂದಿತು.
ಬಸವೇಶ್ವರ ಟಾಕೀಸ್ ಮುಂಭಾಗ, ಎಸ್.ಬಿ.ಎಂ.ರಸ್ತೆ ಹಾಗೂ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನಿಟ್ಟು ವಾಹನಗಳ ಸಂಚಾರವನ್ನು ನಿಯಂತ್ರಿಸಿ ಮೆರವಣಿಗೆಗೆ ಅನುವು ಮಾಡಿ ಕೊಡಲಾಯಿತು. ಆಟೋ, ಬೈಕ್, ಅಪೆ ಗಾಡಿಗಳಲ್ಲಿ ಕುಳಿತ ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲಿ ಹಸಿರು ಬಾವುಟಗಳನ್ನಿಡಿದು ಈದ್‍ಮಿಲಾದನ್ನು ಸಂಭ್ರಮಿಸಿದರು.
ಮೆರವಣಿಯಲ್ಲಿ ಸಾಗಿದ ಎತ್ತಿನ ಬಂಡಿ ಹಾಗೂ ಜಟಕಾ ಗಾಡಿಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಸಾಗಿದ ಕಡೆಗೆಲ್ಲಾ ರಸ್ತೆಯ ಎರಡು ಬದಿಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ನಿಂತು ಪ್ರವಾದಿ ಮಹಮದ್ ಪೈಗಂಬರ್‍ರವರ ಈದ್‍ಮಿಲಾದ್ ಮೆರವಣಿಗೆಯ ಖುಷಿಯನ್ನು ಸವಿದರು. ಅಲ್ಲಲ್ಲಿ ಮನೆಯ ತಾರಸಿಗಳ ಮೇಲೆ ನಿಂತು ಮೊಬೈಲ್‍ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಲಾಗುತ್ತಿತ್ತು.
ಆಯಾ ಕಟ್ಟಿನ ಜಾಗಗಳಲ್ಲಿ ಪೊಲೀಸ್ ಭದ್ರೆಯನ್ನು ಹಾಕಲಾಗಿತ್ತು. ಹೆಚ್ಚುವರಿ ರಕ್ಷಣಾಧಿಕಾರಿ ಮಹಾನಿಂಗ ಬಿ.ನಂದಗಾಂವಿ, ಡಿ.ವೈ.ಎಸ್ಪಿ. ಪಾಂಡುರಂಗಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಅಲ್ಲಲ್ಲಿ ನಿಂತು ಮೆರವಣಿಗೆ ಸುಗಮವಾಗಿ ಸಾಗಲು ಅವಕಾಶ ಕಲ್ಪಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ಎಂ.ಸಿ.ಓ.ಬಾಬು, ಅಲ್ಲಾಭಕ್ಷಿ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರುಗಳು ಹಾಗೂ ಧರ್ಮಗುರುಗಳು, ಫಕೀರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.