ಬೆಂಗಳೂರು: ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು 2001ರಲ್ಲಿ ನಡೆದ ಒಂದು ಘಟನೆ ಹಾಗೂ ಅದರ ಬಗ್ಗೆ ಮಾನ್ಯ ಸಂಸದರಾದ ಸುಬ್ರಹ್ಮಣ್ಯನ್ ಸ್ವಾಮಿ ಅವರು ದೃಶ್ಯ ಮಾಧ್ಯಮಕ್ಕೆ ಕೊಟ್ಟ ಹೇಳಿಕೆ ಮತ್ತು ಅದನ್ನು ಆಧರಿಸಿ ಅನೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ವರದಿ ಆದ ಸುದ್ದಿಯನ್ನು ಒಂದು ವಾಕ್ಯದಲ್ಲಿ ಹೇಳಿದ್ದಾರೆ. ಅದನ್ನು ನೆಪವಾಗಿ ಇಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವರ್ತನೆ ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದರು.
ಈ ವೇಳೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ಸಂಸದರಾದ ಸುಬ್ರಹ್ಮಣ್ಯನ್ ಸ್ವಾಮಿ ಅವರು ಝೀ ನ್ಯೂಸ್‍ನಲ್ಲಿ ಹೇಳಿಕೆ ನೀಡುತ್ತ “2001ರಲ್ಲಿ ರಾಹುಲ್ ಗಾಂಧಿ ಅವರನ್ನು ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿತ ಪ್ರಕರಣಗಳಲ್ಲಿ ಅಮೆರಿಕದಲ್ಲಿ ಫೆಡರಲ್ ಬ್ಯೂರೊ ಆಫ್ ಇನ್‍ವೆಸ್ಟಿಗೇಷನ್ (ಎಫ್‍ಬಿಐ) ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
1.60 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಮಾದಕ ವಸ್ತು ಹೊಂದಿದ್ದ ಆರೋಪ ಅವರ ಮೇಲಿತ್ತು. ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಯುಪಿಎ ಅಧ್ಯಕ್ಷೆಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿ ಅವರ ವಿನಂತಿಯ ಮೇರೆಗೆ ಅಂದಿನ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ವಾಜಪೇಯಿಯವರು ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಜೊತೆ ಮಾತನಾಡಿ, ರಾಹುಲ್ ಗಾಂಧಿಯವರಿಗೆ ಬಿಡುಗಡೆಯ ಭಾಗ್ಯ ಒದಗಿಸಿದ್ದರು ಎಂದು ತಿಳಿಸಿದ್ದು ಇದು ಪತ್ರಿಕೆಗಳು, ಮಾಧ್ಯಮಗಳಲ್ಲಿ ವರದಿಯಾಗಿತ್ತು ಎಂದರು.
ಇದ್ದದ್ದನ್ನು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬ ಗಾದೆಮಾತಿನಂತಾಗಿದೆ ಕಾಂಗ್ರೆಸ್‍ನ ಪರಿಸ್ಥಿತಿ ಎಂದ ಅವರು, ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಈ ಕುರಿತಂತೆ ಚಕಾರ ಎತ್ತಿಲ್ಲ. ಆದ್ದರಿಂದ ಇದು ಸತ್ಯ ಎಂದು ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಒಂದು ಕುಟುಂಬದ ಅಡಿಯಾಳಾಗಿ ಗುಲಾಮಿ ಮಾನಸಿಕತೆ ಹೊಂದಿರುವ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡಿ ಖುಷಿ ಪಡಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಅವರ ಪ್ರತಿಭಟನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.