ಚಿತ್ರದುರ್ಗ,(ಮೇ.04) : ವರ್ಷ ಪೂರ್ತಿ ಶಾಲೆಯಲ್ಲಿ ಕಲಿತು ಪರೀಕ್ಷೆಗಳನ್ನು ಎದುರಿಸಿದ ಮಕ್ಕಳಿಗೆ ಬೇಸಿಗೆ ಶಿಬಿರ ತುಂಬಾ ಅನುಕೂಲಕರವಾಗಿದ್ದು, ವಿವಿಧ ಚಟುವಟಿಕೆಗಳನ್ನು ಕಲಿಯಲು ಶಿಬಿರ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಬುಧವಾರ ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳು ಬೇರೆ ಬೇರೆ ಮಕ್ಕಳ ಜೊತೆ ಹೊಂದಾಣಿಕೆ ಮತ್ತು ಶಿಬಿರದಲ್ಲಿ ಗುಂಪಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದುತ್ತಾರೆ. ಶಿಬಿರದಲ್ಲ್ಲಿ ಮಕ್ಕಳು ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯತವಾಗಿ ಭಾಗವಹಿಸಬೇಕು ಎಂದು ತಿಳಿಸಿದ ಅವರು, ಮಕ್ಕಳಿಗೆ ಪ್ರೇರಣಾತ್ಮಕ ಸಿನಿಮಾಗಳನ್ನು ತೋರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಮನರಂಜನೆಯ ಅವಶ್ಯಕತೆ ಹೆಚ್ಚಿದೆ. ಮಕ್ಕಳಿಗೆ ಆಸಕ್ತಿ ಇರುವಂತಹ ಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸುವಂತೆ ಹೇಳಿದರು. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಕಲಿತರೆ ದೈಹಿಕವಾಗಿ, ಮಾನಸಿಕವಾಗಿ ಸಧೃಡರಾಗುತ್ತೀರಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಮಾತನಾಡಿ, ಬೇಸಿಗೆ ಶಿಬಿರಕ್ಕೆ ಬಂದು ಕಲಿಯುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಭಿವೃದ್ಧಿಯಾಗುತ್ತದೆ. ಶಿಬಿರಗಳನ್ನು ನಡೆಸುವುದರಿಂದ ಪ್ರತಿ ಮಕ್ಕಳಲ್ಲೂ ನಾಯಕತ್ವದ ಗುಣ, ಸೇಹ ಮನೋಭಾವನೆ, ಸಹನೆ, ಹೊಂದಾಣಿಕೆ ಸ್ವಭಾವ ಬೆಳೆಯುತ್ತದೆ ಎಂದು ತಿಳಿಸಿದರು.
ಬೇಸಿಗೆ ಶಿಬಿರದಲ್ಲಿ ಒಟ್ಟು 80 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಬಾಲಕಿಯರ ಭವನ, ಬಾಲಕರ ಭವನ, ವೀಕ್ಷಣಾಲಯದ ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರೆ. 10 ದಿನ ನಡೆಯುವ ಈ ಶಿಬಿರದಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಡಿ.ಕೆ.ಶೀಲಾ, ಬಸವರಾಜು, ಟಿ.ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಾಣಾಧಿಕಾರಿ ನರಸಿಂಹರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸುಧಾ, ಸಂಪನ್ಮೂಲ ವ್ಯಕ್ತಿಗಳಾದ ಭಾರ್ಗವಿ, ಪವಿತ್ರ, ಅನಂತ್‍ರಾವ್ ಇದ್ದರು.