ಚಿತ್ರದುರ್ಗ, (ಫೆ.28): ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿರುವ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದಲ್ಲಿ ಪವಾಡಪುರುಷ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿಯ ಪೂಜೆ, ಆರಾಧನೆಯ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯು ಸುಮಾರು ನಾಲ್ಕು ದಶಕಗಳಿಂದ ನಡೆಯುತ್ತಾ ಬಂದಿದೆ. ಪ್ರತಿ ಸೋಮವಾರ, ಗುರುವಾರ, ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ತ್ರಿವಿಧ ದಾಸೋಹ ಕಾರ್ಯಕ್ರಮಗಳು ಜರುಗುತ್ತವೆ.
2022ರ ಮಾರ್ಚ್ 03ರಂದು ಬೆಳಿಗ್ಗೆ 11ಗಂಟೆ 05 ನಿಮಿಷಕ್ಕೆ 21ನೇ ಮಹಾರಥೋತ್ಸವ ಜರುಗುವುದು. ನಂತರ “ಸಮನ್ವಯ ಸದ್ಗುರು’’ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಜ್ಞಾನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪೂರ್ವವಾದ ಮತ್ತು ಅನನ್ಯವಾದ ಸೇವೆಯನ್ನು ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಬ್ರಹ್ಮವಿದ್ಯಾ ನಗರ ಭಗೀರಥ ಗುರುಪೀಠದ ಪೀಠಾಧ್ಯಕ್ಷರಾದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗೆ `ಸಮನ್ವಯ ಸದ್ಗುರು’’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಅಮ್ಮ ಮಹದೇವಮ್ಮ ಅವರು ಅಧ್ಯಕ್ಷತೆ ವಹಿಸುವರು. ಚಿತ್ರದುರ್ಗದ ಸದ್ಗುರು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಮಹಾಸ್ವಾಮಿ, ಬೆಂಗಳೂರು ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶೃಂಗೇರಿ ಶಾಖೆಯ ಗುಣನಾಥ ಮಹಾಸ್ವಾಮಿಗಳು, ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಸ್ವಾಮೀಜಿ ಸಾನಿಧ್ಯ ವಹಿಸುವರು. ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಆರ್. ರಾಜೇಂದ್ರ, ವಾಣಿಜ್ಯೋದ್ಯಮಿ ಬಿ.ಟಿ.ಸಿದ್ದೇಶ್, ಸತ್ಯನಾರಾಯಣಶೆಟ್ಟಿ, ತಿಮ್ಮಪ್ಪ, ಅಶ್ವತ್ಥರೆಡ್ಡಿ, ವಿ.ಎಲ್.ಪ್ರಶಾಂತ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ.ಆಶಾ ಟಿ. ಅವರ ಚಿತ್ರದುರ್ಗ ನಗರಸಭೆ ಆರ್ಥಿಕ ಅಧ್ಯಯನ’’ ಗ್ರಂಥವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಪಿ.ವೀರಭದ್ರಪ್ಪ ಅವರು ಬಿಡುಗಡೆ ಮಾಡುವರು.
ಸಾಧಕರಾದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಯೋಗೀಶ್ ಅವರಿಗೆ ಸನ್ಮಾನಿಸಲಾಗುವುದು ಹಾಗೂ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಕಾರ್ಯದರ್ಶಿ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.