ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಇರುವುದು ಗೊತ್ತೆ ಇದೆ. ಒಂದು ಡಿಕೆಶಿ ಬಣ ಮತ್ತೊಂದು ಸಿದ್ದರಾಮಯ್ಯ ಬಣ. ಇಂದು ಡಿಕೆಶಿ ಬಣದ ಮಹಿಳೆಯ ಭಾಷಣಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ಅದರಲ್ಲೂ ತನ್ನನ್ನು ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಕ್ಕೆ ಸಿದ್ದರಾಮಯ್ಯ ಆ ರೀತಿ ತಡೆದಿದ್ದಾರೆ.
ಇಂದು ದಾಸರಹಳ್ಳಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ಈ ಕಾರ್ಯಕ್ರಮ ವೇದಿಕೆಯಲ್ಲಿ ಭಾಷಣ ಮಾಡಲು ಹೋದ ಗೀತಾ ಶಿವರಾಮ್, ನಾನೇ ಎಂಎಲ್ಎ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದರು. ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಅವರ ಭಾಷಣ ತಡೆಯಲು ಯತ್ನಿಸಿದರು ಇದರಿಂದ ಗೀತಾ ಶಿವರಾಮ್ ವೇದಿಕೆಯಿಂದ ಅಳುತ್ತಾ ಕೆಳಗಿಳಿದರು.
ಬಳಿಕ ಸಿದ್ದರಾಮಯ್ಯ ಅವರು ವೇದಿಕೆ ಮೇಲೆರಿ ಭಾಷಣ ಮಾಡಿದರು. ಆದರೆ ಭಾಷಣ ಶುರು ಮಾಡುವುದಕ್ಕೂ ಮುನ್ನವೇ ಸಿದ್ದರಾಮಯ್ಯ ಅವರ ಹೆಸರನ್ನು ಜೋರಾಗಿ ಕೂಗಲು ಶುರು ಮಾಡಿದರು. ಬಳಿಕ ಎಲ್ಲರನ್ನು ಸುಮ್ಮನೆ ಇರಲು ಸೂಚಿಸಿದರು. ಆದರೂ ಸುಮ್ಮನೆ ಇರದೆ ಇದ್ದಾಗ ಮತ್ತೊಮ್ಮೆ ಗದರಿದ್ದಾರೆ. ಕಾರ್ಯಕ್ರಮ ಮಾಡುವುದು ದೊಡ್ಡದಲ್ಲ, ಶಿಸ್ತು ಮುಖ್ಯ ಎಂದಿದ್ದಾರೆ.
ಕಾರ್ಯಕ್ರಮದ ಆಯೋಜಕರ ಬಗ್ಗೆ ಸಿದ್ದರಾಮಯ್ಯ ಗರಂ ಆಗಿದ್ದರು. ವೇದಿಕೆ ಮೇಲೆ ಇದ್ದ ಕಾರ್ಯಕರ್ತರನ್ನು ಕೆಳಗಿಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಶಿಸ್ತಿನ ಪಾಠ ಮಾಡಿದರು.