ಬೆಂಗಳೂರು: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಸುಳ್ಳು ರಾಜ್ಯದ ರೈತರ ಆತಂಕ ಸೃಷ್ಟಿ ಮಾಡುತ್ತಿದ್ದು, ಉಪಚುನಾವಣೆಯ ಸೋಲಿನ ಭೀತಿ ಹಾಗೂ ಹತಾಶೆಯಿಂದ ರೈತರ ರಸಗೊಬ್ಬರ ಬಗ್ಗೆ ಸುಳ್ಳು ವದಂತಿ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ತಿರುಗೇಟು ನೀಡಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಗವಂತ ಖೂಬಾ, ಕಳೆದ ಎರಡು ವರ್ಷದಲ್ಲಿ ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸ್ವಲ್ಪ ಭಾಗದಲ್ಲಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಹೆಚ್ಚಾಗುತ್ತಿದೆ. ರಾಜ್ಯದ ರೈತರು ಅದನ್ನು ಅಳವಡಿಸಿಕೊಂಡರೆ ರೈತರಿಗೆ ಅನುಕೂಲವಾಗಲಿದೆ. ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರದಿಂದ ಹೆಚ್ಚಿನ ಉತ್ಪಾದನೆ ಹೆಚ್ಚಾಗುತ್ತಿದೆ.ಹೀಗಾಗಿ ಕಾರಣಕ್ಕೆ ಸರ್ಕಾರ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಖರೀದಿಗೆ ಸೂಚಿಸಲಾಗುತ್ತಿದೆ. ಇದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ರೈತರು ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದವರು. ರೈತರಿಗೆ ಈ ರೀತಿ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಈ ರೀತಿ ವದಂತಿ ಸೃಷ್ಟಿಸಿದರೆ ರಸಗೊಬ್ಬರದ ಕೊರತೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಮುಂದಿನ ನಾಲ್ಕು ತಿಂಗಳಿಗೆ ಬೇಕಾದಷ್ಟು ಗೊಬ್ಬರ ಸಂಗ್ರಹಕ್ಕೆ ಮುಂದಾಗುತ್ತಾರೆ. ಇದರಿಂದ ದಲ್ಲಾಳಿಗಳ ಹಾವಳಿ ಹೆಚ್ಚಾಗಲಿದೆ.ಕಾಳಸಂತೆಯಲ್ಲಿ ರಸಗೊಬ್ಬರಕ್ಕೆ ಮಾರಾಟಕ್ಕೆ ಅವಕಾಶ ಕೊಡಬಾರದು. ನಾನು ಇಲಾಖೆಯ ಜವಾಬ್ದಾರಿ ಸಚಿವನಾಗಿ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.