ಬೆಂಗಳೂರು: ಮೇಕೆದಾಟು ಯೋಜನೆ ಬರೀ ರಾಜಕೀಯ ಪಾದಯಾತ್ರೆ, ಅವರ ಸರ್ಕಾರವೇ ಅಧಿಕಾರದಲ್ಲಿದ್ದಾಗಲೇ ಇದನ್ನ ಅನುಷ್ಠಾನಗೊಳಿಸಬಹುದಾಗಿತ್ತು ಅಂತ ಬಿಜೆಪಿಗರು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದರು. ಆರೋಪಿಸಿದ್ದರು. ಇದೀಗ ಆ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಎಲ್ಲಾ ತಪ್ಪು ಮಾಹಿತಿ ನೀಡ್ತಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ.
ಜೊತೆಗೆ ರಾಜ್ಯ ಸರ್ಕಾರ ವಿಧಿಸಿರುವ ಕರ್ಫ್ಯೂ ಬಗ್ಗೆಯೂ ಕಿಡಿಕಾರಿದ್ದಾರೆ. ಇಂದಿನಿಂದ ಮೇಕೆದಾಟು ಯೋಜನೆಗಾಗಿ ಶುರುವಾದ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಯೋಜನೆ ಜಾರುಗೆ ತರಲು ವಿಳಂಬ ಮಾಡುತ್ತಿರುವುದಲ್ಲದೆ, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಮೇಲಾಗುತ್ತಿದೆ. ಆದರೂ ಯೋಜನೆ ಜಾರಿಗೆ ತರಲು ವಿಳಂಬ ಮಾಡುತ್ತಿದೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಏನು ಮಾಡಿಲ್ಲ ಎಂಬ ತಪ್ಪು ಮಾಹಿತಿಯನ್ನು ನೀಡುತ್ತಿದೆ.
2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಆ ಯೋಜನೆ ಬಗ್ಗೆ ಸಭೆ ಮಾಡಿ, ಡಿಪಿಆರ್ ಮಾಡಬೇಕೆಂದು ತೀರ್ಮಾನಿಸಿ, ಎಲ್ಲವನ್ನು ತಯಾರಿ ಮಾಡಿಕೊಂಡಿದ್ದೆವು. ಡಿಪಿಆರ್ ಕೂಡ ಸಿದ್ಧವಾಗಿತ್ತು. ಆಗಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿಕೆ ಶಿವಕುಮಾರ್, ರಿವೈಸ್ಡ್ ಡಿಪಿಆರ್ ಸಲ್ಲಿಸಿದ್ದಾರೆ. ನಮ್ಮ ಕಾಲದಲ್ಲಿ ಯಾವುದೇ ವಿಳಂಬವಾಗಿಲ್ಲ. ಬಿಎಸ್ವೈ, ಸದಾನಂದಗೌಡ, ಶೆಟ್ಟರ್ ಸಿಎಂ ಆಗಿದ್ದವರು. ಅವರ್ಯಾರು ಆ ಯೋಜನೆಯನ್ನ ಕೈಗೆತ್ತಿಕೊಳ್ಳಲೇ ಇಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ.