ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಬೆಂಗಳೂರಿನ ವಿಧಾನಸೌಧದಲ್ಲಿ ನಿನ್ನೆ ನಡೆದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ.ಬಿ.ಎಲ್.ವೇಣುರವರಿಗೆ ಚಿತ್ರದುರ್ಗದ ಮುನ್ಸಿಪಲ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಅಭಿಮಾನಿಗಳು ಶಾಲು ಹೊದಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ಬಿ.ಎಲ್.ವೇಣು ಚಿತ್ರದುರ್ಗದ ಕರುವಿನಕಟ್ಟೆಯಲ್ಲಿ ನಾನು ಹುಟ್ಟಿ ಬೆಳೆದಿದ್ದರಿಂದ ದೇವಾನುದೇವತೆ, ಕೋಟೆ ಕೊತ್ತಲ, ಸಾಹಿತ್ಯ, ಬರವಣಿಗೆ, ಪಾಳೆಯಗಾರರ ಕುರಿತು ಕಾದಂಬರಿಗಳನ್ನು ಬರೆಯಲು ನೆರವಾಯಿತು. ವಾಲ್ಮೀಕಿ ಪ್ರಶಸ್ತಿಗೆ ನಾನು ಎಂದಿಗೂ ಲಾಭಿ ಮಾಡಿದವನಲ್ಲ. ನನ್ನ ಪಾಡಿಗೆ ನಾನು ಬರವಣಿಗೆಯಲ್ಲಿ ಮಗ್ನನಾಗಿರುತ್ತೇನೆ. ಪ್ರಶಸ್ತಿಗಳು ಬರುವುದಾದರೆ ಬರಲಿ. ಅದಕ್ಕಾಗಿ ಆಸೆ ಪಟ್ಟು ಕಾದು ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ನಿಷ್ಠುರುವಾಗಿ ನುಡಿದರು.
ನನ್ನ ಅನೇಕ ಕಾದಂಬರಿಗಳು ಸಿನಿಮಾ ಆಗಿವೆ. ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೇನೆ. ಕಲ್ಲರಳಿ ಹೂವಾಗಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಅದೂ ಕೂಡ ನನಗೆ ಸಂತೋಷವನ್ನುಂಟು ಮಾಡಿದೆ. ಮತ್ತಿ ತಿಮ್ಮಣ್ಣನಾಯಕ, ಭರಮಣ್ಣನಾಯಕನ ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದೇನೆ. ಕರುವಿನಕಟ್ಟೆಯಲ್ಲಿ ನಾನು ಹುಟ್ಟಿ ಬೆಳೆದವನಾಗಿದ್ದರಿಂದ ಅಲ್ಲಿನ ಹಿಂದು-ಮುಸಲ್ಮಾನರ ಭಾವೈಕ್ಯತೆ, ಆಚಾರ, ವಿಚಾರ, ಸಂಸ್ಕøತಿ ಇವುಗಳನ್ನೆಲ್ಲಾ ಬಾಲ್ಯದಿಂದಲೇ ನೋಡಿದ್ದರಿಂದ ಬರವಣಿಗೆ ಬಗ್ಗೆ ನನ್ನಲ್ಲಿ ಆಸಕ್ತಿ ಮೂಡಿತು. ವಾಲ್ಮೀಕಿ ಪ್ರಶಸ್ತಿ ನನಗೆ ಸಿಕ್ಕಿರುವುದು ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.
ಜೆಡಿಎಸ್.ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ಬಿ.ಎಲ್.ವೇಣುರವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಮಾತನಾಡುತ್ತ ಚಿತ್ರದುರ್ಗ ಹೆಮ್ಮೆಯ ಸಾಹಿತಿ ಡಾ.ಬಿ.ಎಲ್.ವೇಣುರವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿರುವುದು ಐತಿಹಾಸಿಕ ಚಿತ್ರದುರ್ಗಕ್ಕೆ ಸಿಕ್ಕ ಗೌರವ ಎಂದು ಗುಣಗಾನ ಮಾಡಿದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಪ್ಪ ಮಾತನಾಡಿ ಸಾಹಿತ್ಯದ ಮೂಲಕ ನಾಡಿನಾದ್ಯಂತ ಪ್ರಸಿದ್ದ ಪಡೆದಿರುವ ಡಾ.ಬಿ.ಎಲ್.ವೇಣುರವರಿಗೆ ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.
ಮಡಿವಾಳ ಜನಾಂಗದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ ಮಾತನಾಡುತ್ತ ಬರವಣಿಗೆ ಮೂಲಕ ಚಿತ್ರದುರ್ಗದ ಪಾಳೆಯಗಾರರ, ದೇವಾನುದೇವತೆಗಳ ಇತಿಹಾಸವನ್ನು ಎಲ್ಲೆಡೆ ಪಸರಿಸಿರುವ ಸಾಹಿತಿ ಡಾ.ಬಿ.ಎಲ್.ವೇಣುರವರು ಸೂಕ್ಷ್ಮ ಹಾಗೂ ಮೊನಚಾದ ಬರವಣಿಗೆಯ ಮೂಲಕ ಮನೆ ಮಾತಾಗಿದ್ದಾರೆ. ಇನ್ನು ಶ್ರೇಷ್ಟ ಕಾದಂಬರಿಗಳು ಹೊರ ಹೊಮ್ಮಲಿ, ತಾಯಿ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮನ ಕೃಪೆ ಅವರ ಮೇಲಿರಲಿ ಎಂದು ಪ್ರಾರ್ಥಿಸಿದರು.
ಶಾರದಾ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ಮಾತನಾಡಿ ಚಿಕ್ಕಂದಿನಿಂದಲೆ ಕಲೆ, ಆರ್ಕೆಸ್ಟ್ರಾಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿಕೊಂಡಿದ್ದ ಡಾ.ಬಿ.ಎಲ್.ವೇಣುರವರು ಸಾಹಿತ್ಯ, ಐತಿಹಾಸಿಕ ಕಾದಂಬರಿಗಳ ಮೂಲಕ ಹೆಮ್ಮರವಾಗಿ ಬೆಳೆದಿದ್ದಾರೆ. ಇವರ ಅನುಪಮ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿ ಚಿತ್ರದುರ್ಗದ ಕೀರ್ತಿಯನ್ನು ಎತ್ತರಕ್ಕೇರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.