ಬೆಂಗಳೂರು: ಕಾಂಗ್ರೆಸ್ ಅಪಪ್ರಚಾರ ಮಾಡಿದ್ದಕ್ಕೆ ಲಸಿಕೆ ವಿಚಾರದಲ್ಲಿ ಹಿನ್ನಡೆಯಾಗಿದೆ ಎಂಬ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಣಿಯಲಾಗದವರು ನೆಲ ಡೊಂಕು ಎನ್ನುವ ಹಾಗೆ, ಕೋವಿಡ್ ಆರಂಭದಲ್ಲಿ ಸಗಣಿ ಬಳಿದುಕೊಳ್ಳಿ, ಗಂಜಲ ಕುಡಿಯಿರಿ, ಹಪ್ಪಳ ತಿನ್ನಿ, ಗಂಟೆ ಬಾರಿಸಿ, ದೀಪ ಹಚ್ಚಿ ಎಂದ ನೀವು ಎಂತಹ ಅವಿವೇಕಿಗಳು ಎಂದು ಇಡೀ ದೇಶ ನೋಡಿದೆ ಎಂದು ಬಿ ಕೆ ಹರಿ ಪ್ರಸಾದ್ ಕಿಡಿಕಾರಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತ ಸರ್ಕಾರದ ಈ ನಿರ್ಧಾರವನ್ನು ನೋಡಿ ಇಡೀ ಜಗತ್ತು ನಕ್ಕಿದೆ. ಮೋದಿ ಅವರ ಸ್ನೇಹಿತರಾದ ಬ್ರೆಜಿಲ್ ಅಧ್ಯಕ್ಷರು ಕೋವಿಡ್ ಸಮಯದಲ್ಲಿ ಇವರು ಮಾಡಿದ ಕ್ರಮಗಳು ಮಾನವೀಯತೆ ಮೇಲೆ ನಡೆದಿರುವ ದೌರ್ಜನ್ಯ ಎಂದು ಹೇಳಿದ್ದಾರೆ. ಹೀಗಾಗಿ ರವಿ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಕೊಂಡಿರಲಿ. ಈ ವಿಚಾರವನ್ನು ಪ್ರಧಾನಿ, ಆರೋಗ್ಯ ಸಚಿವರೇ ಮಾತನಾಡಲು ಬಿಡಲಿ ಎಂದು ತಿರುಗೇಟು ಕೊಟ್ಟರು.
ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಮಂದಗತಿಯಾಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಜನಸಂಖ್ಯೆ ಚೀನಾದಲ್ಲೂ ಹೆಚ್ಚಾಗಿದೆ. ಬೇರೆ ರಾಷ್ಟ್ರಗಳಲ್ಲೂ 2 ಡೋಸ್ ಕೊಟ್ಟು ಬೋಸ್ಟರ್ ಡೋಸ್ ಕೊಟ್ಟಿದ್ದಾರೆ. ಆತ್ಮನಿರ್ಭರ, ಮೇಕ್ ಇನ್ ಇಂಡಿಯಾ ಎಂದು ಬಿಂಬಿಸಿದ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮಾನ್ಯತೆ ಸಿಕ್ಕಿಲ್ಲ. ಅದರ ಬಗ್ಗೆ ವಿಶ್ವಕ್ಕೆ ಮಾಹಿತಿ ನೀಡಿ ಅದಕ್ಕೆ ಮಾನ್ಯತೆ ಕೋಡಿಸಬೇಕಾಗಿರುವುದು ಸರ್ಕಾರದ ಕೆಲಸ. ಆದರೆ ಆ ಕಂಪನಿಯವರೆ ಅದನ್ನು ಮಾಡಿಕೊಳ್ಳಲಿ ಎಂದು ಬಿಟ್ಟುಬಿಟ್ಟರು.
ಹಳ್ಳಿ ಜನ ಲಸಿಕೆಗೆ ಹಿಂದೇಟು ಹಾಕಿಲ್ಲ. ಸರ್ಕಾರದ ಬಳಿ ಲಸಿಕೆ ಇಲ್ಲ. ಎರಡನೇ ಅಲೆ ಬಂದಾಗ ಪ್ರಧಾನಿಗಳು ಸುರಕ್ಷತೆ ಜವಾಬ್ದಾರಿಯನ್ನು ಜನರ ಮೇಲೆ ಹಾಕಿದರು. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ದೇವರೇ ಕಾಪಾಡಬೇಕು ಎಂದರು. ಈಗ ಉಚಿತ ಲಸಿಕೆ ಕೊಟ್ಟಿದ್ದೇವೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ದೇಶದಲ್ಲಿ ಈ ಹಿಂದೆ ಸಿಡುಬು, ಕಾಲರ ರೋಗಕ್ಕೆ ಕೇಂದ್ರ ಸರ್ಕಾರವೇ ಲಸಿಕೆ ನೀಡಿತ್ತು. ಅವರೇನು ತಮ್ಮ ಪಿತ್ರಾರ್ಜಿತ ಆಸ್ತಿ ಮಾರಿ ಕೊಟ್ಟಿದ್ದಾರಾ? ಜನರ ಹಣದಲ್ಲಿ ಕೊಟ್ಟು ಇವರೇ ಕೊಟ್ಟಂತೆ ಪ್ರಚಾರ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಕ್ಷಮೆಯಾಚಿಸಬೇಕು’ ಎಂದರು.
‘ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮೊನ್ನೆ ಭ್ರಷ್ಟರನ್ನು ಬಿಡುವುದಿಲ್ಲ ಎಂದು ಪ್ರಚಾರ ಪಡೆದಿದ್ದಾರೆ. ಆದರೆ ನೀರವ್ ಮೋದಿ, ಚೋಕ್ಸಿ, ವಿಜಯ್ ಮಲ್ಯ ಅವರೆಲ್ಲ ವಿದೇಶದಲ್ಲಿ ಆರಾಮಾಗಿದ್ದಾರೆ. ತಮ್ಮನ್ನು ತಾವು ವಿಶ್ವಗುರು ಎಂದು ಕರೆದುಕೊಳ್ಳುವ ಮೋದಿ ಅವರು ಯಾಕೆ ಅವರನ್ನು ಕರೆತರುತ್ತಿಲ್ಲ. ಇವೆಲ್ಲವೂ ಪ್ರಚಾರ ನಡೆಸಲು ಹೇಳುತ್ತಾರೆಯೇ ಹೊರತು, ಜನರನ್ನು ಕಾಯುವ ವಿಚಾರವಾಗಿ ಯಾವ ಕ್ರಮವೂ ಇಲ್ಲ ಎಂದರು.