ಚಿತ್ರದುರ್ಗ,(ಅಕ್ಟೋಬರ್.08) : ನಗರದ ಮೆದೇಹಳ್ಳಿ ರಸ್ತೆಯ ರೈಲ್ವೆ ಕೆಳ ಸೇತುವೆ ಹಾಗೂ ತುರುವನೂರು ರಸ್ತೆಯ ರೈಲ್ವೆ ಕೆಳಸೇತುವೆಯಲ್ಲೂ ಮಳೆ ನೀರು ನಿಂತು ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ಎ. ನಾರಾಯಣ ಸ್ವಾಮಿ ಶುಕ್ರವಾರ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈಲ್ವೆ ಕೆಳ ಸೇತುವೆಗಳಲ್ಲಿ ಯಾವುದೇ ಕಾರಣಕ್ಕೂ ಮಳೆ ನೀರು ಶೇಖರಣೆಯಾಗಕೂಡದು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಜಿಲ್ಲೆಯ ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಕುರಿತು ಅನೇಕ ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಖುದ್ದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸ್ಥಳ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ರೈಲ್ವೆ ಕೆಳಸೇತುವೆಗಳಲ್ಲಿ ಮಳೆ ನೀರು ನಿಲ್ಲದಂತೆ ಸರಾಗವಾಗಿ ಹರಿದುಹೋಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 14 ರೈಲ್ವೆ ಕೆಳಸೇತುವೆಗಳಿದ್ದು, ಯಾವುದೇ ಕಾರಣಕ್ಕೂ ಈ ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸೋಮವಾರದೊಳಗೆ ಎಲ್ಲಾ ರೈಲ್ವೆ ಕೆಳಸೇತುವೆಗಳ ಸ್ಥಳ ವೀಕ್ಷಣೆಗೆ ಸೂಚನೆ; ಮಳೆ ಬಂದಾಗ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲುವ ಮೂಲಕ ಜನ ಹಾಗೂ ವಾಹನಗಳ ಓಡಾಡಕ್ಕೆ ತೊಂದರೆಯಾಗಿದೆ. ಇದಕ್ಕೆ ಏನು ಕಾರಣ, ಪರಿಹಾರಕ್ಕೆ ಏನು ಕ್ರಮ ಎಂಬುದರ ಬಗ್ಗೆ ರೈಲ್ವೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್, ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ತನಿಖೆ ಮಾಡಿ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವರಾದ ಎ.ನಾರಾಯಣಸ್ವಾಮಿಯವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ನೈರುತ್ಯ ರೈಲ್ವೆ ಇಲಾಖೆ ಚಿತ್ರದುರ್ಗ ಸಹಾಯಕ ವಿಭಾಗೀಯ ಅಭಿಯಂತರ ಶುಭಂಶರ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.