ಸುದ್ದಿಒನ್, ಚಿತ್ರದುರ್ಗ, (ಅ.06) : ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಮಳೆ ಕಾಟ ಶುರುವಾಗಿದೆ.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅ.8 ರಿಂದ ವಾಲಿಬಾಲ್ ಪಂದ್ಯಾವಳಿ ಆರಂಭಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದವು. ಆದರೆ ಮಳೆ ಕಾರಣಕ್ಕೆ ಪಂದ್ಯಾವಳಿಯನ್ನು ಮುಂದೂಡುವ ಚಿಂತನೆಯಲ್ಲಿದ್ದಾರೆ ಆಯೋಜಕರು.
ಈ ಬಗ್ಗೆ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್.ನವೀನ್, ಐದು ದಿನಗಳ ಕಾಲ ಪಂದ್ಯಾವಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ. ಗುರುವಾರ ಆಗಮಿಸುವ ತಜ್ಞರ ತಂಡ ಒಪ್ಪಿಗೆ ಸೂಚಿಸಿದರೆ 8 ರ ಸಂಜೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ ಎಂದರು.
ಹೊನಲು ಬೆಳಕಿನ ಪಂದ್ಯಾವಳಿಗೆ ಒಟ್ಟು 11 ತಂಡಗಳನ್ನು ಆಹ್ವಾನಿಸಲಾಗಿದೆ. ಎಲ್ಲರೂ ಆಗಮಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಮಳೆಯ ಮೇಲೆ ಎಲ್ಲವೂ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ 8 ರಂದು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ನಡೆಸಲಾಗುತ್ತದೆ. ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ, ಸೇನಾನಿ, ಉರಗ ಪ್ರೇಮಿ ಸ್ನೇಕ್ ಶ್ಯಾಂ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಾ.ಶಿವಮೂರ್ತಿ ಮುರುಘಾ ಶರಣರು, ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೆಇಬಿ ಷಣ್ಮುಖಪ್ಪ ಮೋಹನ್, ಇತರರಿದ್ದರು.