ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,ಸುದ್ದಿಒನ್, (ಅ.10): ರಾಜಕೀಯವಾಗಿ ಎಲ್ಲಾ ಹಂತದಲ್ಲೂ ವೈಫಲ್ಯವಾಗಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಮುಳುಗಿಸಲು ಹೊರಟಿರುವ ರಾಹುಲ್ಗಾಂಧಿ ಯಾವ ಅರ್ಥದಲ್ಲಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 1952 ರಿಂದ ಇಲ್ಲಿಯವರೆಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹೆಚ್ಚು ಬಾರಿ ಗೆದ್ದಿದೆ. ಬಹಳ ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಿದ ಕೆ.ಎಸ್.ನವೀನ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದವರು ಹೆಚ್ಚಾಗಿರುವ ಚಿತ್ರದುರ್ಗ ಜಿಲ್ಲೆಯಿಂದ ಮತ ಪಡೆದು ಅಧಿಕಾರ ಚಲಾಯಿಸಿದ ಕಾಂಗ್ರೆಸ್ ಕೊಡುಗೆ ಏನು?
ವಾಣಿವಿಲಾಸ ಸಾಗರಕ್ಕೆ ಭದ್ರಾಮೇಲ್ದಂಡೆ ಯೋಜನೆಯನ್ನು ನೀಡಬೇಕೆಂಬ ಜಿಲ್ಲೆಯ ರೈತರ, ಜನಸಾಮಾನ್ಯರ ಬೇಡಿಕೆಯನ್ನು ನಿರ್ಲಕ್ಷಿಸಿದೆ. 2009 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಭದ್ರಾಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದರು. ನಂತರ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ 2013 ರಿಂದ 18 ರವರೆಗೆ ಅಧಿಕಾರದಲ್ಲಿದ್ದರೂ ಮೆಡಿಕಲ್ ಕಾಲೇಜು ಏಕೆ ಪ್ರಾರಂಭಿಸಲಿಲ್ಲ.
ಕೇಂದ್ರದಲ್ಲಿ ಯು.ಪಿ.ಎ- ಸರ್ಕಾರವಿದ್ದಾಗ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರು ರೈಲು ಮಾರ್ಗಕ್ಕೆ ಹಣ ಹಾಕುವ ಪದ್ದತಿಯಿತ್ತು. ಆದರೂ ಚಿತ್ರದುರ್ಗಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸಿದ್ದರಾಮಯ್ಯನವರ ಕಾಲದಲ್ಲಿ ಅನೇಕ ಹಗರಣಗಳನ್ನು ಎಸಗಿರುವವರನ್ನು ಜೊತೆಯಲ್ಲಿಟ್ಟುಕೊಂಡಿದೆ. ಯಾವ ಪುರುಷಾರ್ಥಕ್ಕಾಗಿ ರಾಹುಲ್ಗಾಂಧಿ ಭಾರತ್ ಜೋಡೋ ಯಾತ್ರೆ ಹೊರಟಿದ್ದಾರೆ. ಪ್ರಧಾನಿ ಮೋದಿ ನಿಜವಾಗಿಯೂ ಭಾರತ್ಜೋಡೋ ಪ್ರಯತ್ನ ಮಾಡುತ್ತಿರುವುದನ್ನು ರಾಹುಲ್ಗಾಂಧಿ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನೆ ಹಾಕಿದರು.
ಜಮ್ಮು-ಕಾಶ್ಮೀರಕ್ಕೆ ಕಾಂಗ್ರೆಸ್ ನೀಡಿದ್ದ 370 ನೇ ವಿಧಿಯನ್ನು ದಿಟ್ಟತನದಿಂದ ರದ್ದುಗೊಳಿಸಿದ ಪ್ರಧಾನಿ ಮೋದಿ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದ್ದು, ಭಾರತ್ ಜೋಡೋ ಅಲ್ಲವೇನು? ಬಾಂಗ್ಲಾ ವಿಮೋಚನೆಗೆ ನಮ್ಮ ದೇಶದ ಸಂಪತ್ತು, ಸೈನ್ಯವನ್ನು ಬಳಸಿಕೊಂಡು ಇಂದಿರಾಗಾಂಧಿ ಬಾಂಗ್ಲಾಗೆ ಸ್ವಾತಂತ್ರ್ಯ ನೀಡಿದ್ದು, ಯಾವ ಕಾರಣಕ್ಕಾಗಿ. ನಮ್ಮ ದೇಶದ ಸಂಸ್ಕøತಿ ಪರಂಪರೆಯನ್ನು ಬೇರೆ ದೇಶಗಳು ಸ್ವಾಗತಿಸುತ್ತಿವೆ.
ಇದಕ್ಕೆಲ್ಲಾ ಕಾರಣ ಈಗಿನ ಪ್ರಧಾನಿ ಮೋದಿ ಎನ್ನುವುದನ್ನು ರಾಹುಲ್ ಒಪ್ಪಿಕೊಳ್ಳಲಿ. ಅನ್ನಭಾಗ್ಯ, ಗರೀಬ್ ಕಲ್ಯಾಣ್ ಯೋಜನೆ, ಕೃಷಿ ಸಮ್ಮಾನ್ ಅಡಿ ರೈತರಿಗೆ ನೆರವು, ಚಳ್ಳಕೆರೆಯಿಂದ ಬಳ್ಳಾರಿವರೆಗೂ ಚತುಷ್ಪಥ ರಸ್ತೆ ಇವುಗಳೆಲ್ಲಾ ಬಿಜೆಪಿ.ಕೊಡುಗೆ ಎನ್ನುವುದನ್ನು ರಾಹುಲ್ ಮುಕ್ತಕಂಠದಿಂದ ಮೊದಲು ಶ್ಲಾಘಿಸಲಿ. ದೇಶದ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ ಮುಂದೆ ಅವನ್ನು ಕಳೆದುಕೊಳ್ಳುತ್ತದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಹುಲ್ಗಾಂಧಿ ಇವರುಗಳು ಜಿಲ್ಲೆಗೆ ಅನ್ಯಾಯ ಮಾಡಿರುವುದಕ್ಕಾಗಿ ಮೊದಲು ಜನತೆಯ ಕ್ಷಮೆ ಕೇಳಲಿ. ಜಿಲ್ಲೆಗೆ ಮಲತಾಯಿ ಧೋರಣೆಯಾಗಿದೆ.
ಡಿ.ಕೆ.ಶಿವಕುಮಾರ್ ಇಂಧನ ಮಂತ್ರಿಯಾಗಿದ್ದಾಗ ಸೋಲಾರ್ ಪ್ರಾಜೆಕ್ಟ್ನಲ್ಲಿ ರೈತರಿಗೆ ಮೋಸವಾಗಿ ಬೇರೆ ಬೇರೆ ಕಂಪನಿಗಳ ಪಾಲಾದವು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ರೈತರು ಬೆಳೆನಷ್ಟ ಮತ್ತು ಸಾಲದ ಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ರೈತರು ಸಮೃದ್ದಿಯಾಗಿದ್ದಾರೆಂದರೆ ಅದಕ್ಕೆ ದೇಶದ ಪ್ರಧಾನಿ ನರೇಂದ್ರಮೋದಿ ಕಾರಣ ಎನ್ನುವುದನ್ನು ರಾಹುಲ್ಗಾಂಧಿ ಒಪ್ಪಿಕೊಳ್ಳುತ್ತಾರಾ. ಇಲ್ಲದಿದ್ದರೆ ಇದೊಂದು ಪ್ರಾಯಶ್ಚಿತ್ತ ಪಾದಯಾತ್ರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷ ಕಲ್ಲೇಶಯ್ಯ, ವಕ್ತಾರ ನಾಗರಾಜ್ಬೇದ್ರೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.