ಚಿತ್ರದುರ್ಗ, (ಅ.29) : ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ನಟರೊಂದಿಗೆ ಪಾತ್ರ ನಿರ್ವಹಿಸಿ, “ಅಪ್ಪು” ಎಂದೇ ದಿಗ್ಗಜ ನಟರ, ಕನ್ನಡ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದ ಕನ್ನಡ ನಾಡಿನ ದೊಡ್ಡ ನಟ ಪುನೀತ್ ರಾಜ್‍ಕುಮಾರ್ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ.
ವಯಸ್ಸು ಕಿರಿದು, ನಟನೆ ಹಿರಿದು ಪುನೀತ್ ಹೆಗ್ಗಳಿಕೆ ಆಗಿತ್ತು. ಅಣ್ಣಾವ್ರ ರೀತಿಯೇ ಸೌಜನ್ಯದ ಮೂರ್ತಿಯಂತೆ ಹಿರಿಯರು, ಕಿರಿಯರನ್ನು ಗೌರವಿಸುವ ಗುಣ ಹೊಂದಿದ್ದರು.
ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ಡಾ.ರವಿಚಂದ್ರನ್, ಶಂಕರನಾಗ್, ಅನಂತನಾಗ್ ಸೇರಿದಂತೆ ಅನೇಕ ದಿಗ್ಗಜ ನಟರ ಸಾಲಿನತ್ತ ಸಾಗುತ್ತಿದ್ದ ಪುನೀತ್, ಅಣ್ಣಾವ್ರ ಸ್ಥಾನ
ತುಂಬುವ ರೀತಿಯಲ್ಲಿಯೇ ನಟನೆ ಹಾಗೂ ವೈಯಕ್ತಿಕ ಬದುಕನ್ನು ರೂಪಿಸಿಕೊಂಡಿದ್ದರು.
ಮಧ್ಯ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಚಕ್ರವರ್ತಿ ಎಂದೇ ಗುರುತಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್, ಚಿಕ್ಕ ವಯಸ್ಸಿನಲ್ಲಿಯೇ ಬಾರದ ಊರಿಗೆ ಹೋಗಿದ್ದು ನಾಡಿನ ದುರಂತ.
ಹೃದಯವಂತಿಕೆ, ಸರಳತೆ, ಸೌಜನ್ಯತೆ, ಅಪ್ರತಿಮ ನಟನೆ ಹೀಗೆ ಅನೇಕ ಕಾರಣಕ್ಕೆ ಚಿಕ್ಕ
ವಯಸ್ಸಿನಲ್ಲಿಯೇ ನಾಡಿನ ಜನರ, ದಿಗ್ಗಜ ನಟರ, ನಿರ್ಮಾಪಕರ, ರಾಜಕಾರಣಗಳ, ಸಾಹಿತಿಗಳ
ಮನಗೆದ್ದಿದ್ದ ಪುನೀತ್ ಅಕಾಲಿಕ ಸಾವು ನನ್ನಂತಹ ಕೋಟ್ಯಂತರ ಜನರಿಗೆ ತೀವ್ರ ಆಘಾತವನ್ನು
ಉಂಟು ಮಾಡಿದೆ.
ರಾಜ್‍ಕುಮಾರ್ ರೀತಿಯೇ ಕೌಟಂಬಿಕ ಚಿತ್ರಗಳತ್ತ ಹೆಚ್ಚು ಆಸಕ್ತಿ ಹೊಂದಿದ್ದ ಪುನೀತ್, ಕುಟುಂಬದ ಸದಸ್ಯರೆಲ್ಲರೂ ಕುಳಿತು ನೋಡುವಂತ ಚಿತ್ರಗಳಲ್ಲಿ ನಡೆಸುವ ಆಸೆ ಹೊಂದಿದ್ದು, ಅದರಂತೆ ಅಂತಹ ಚಿತ್ರಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ.
ತಂದೆ ರಾಜ್‍ಕುಮಾರ್ ರೀತಿ ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪುನೀತ್ ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಸದಾ ಇರುತ್ತಾರೆ.
ದೊಡ್ಡ ನಟನಾಗಿ ಹೊರಹೊಮ್ಮಿದ್ದ ಪುನೀತ್ ರಾಜಕುಮಾರ್ ಅಕಾಲಿಕ ಅಗಲಿಕೆ ನೋವನ್ನು
ತಡೆದುಕೊಳ್ಳುವ ಶಕ್ತಿ ಕುಟುಂಬ ವರ್ಗ, ಅಭಿಮಾನಿಗಳು, ಕನ್ನಡ ನಾಡಿನ ಜನತೆಗೆ ಬಸವಾದಿ ಶರಣರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.