ದಶಕಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಕೊನೆಗೂ ಮೋಕ್ಷ ಸಿಕ್ಕಿದೆ. ಇತ್ತೀಚೆಗಷ್ಟೇ ನಡೆದ ಸಂಸತ್ತಿನ ವಿಶೇಷ ಅಧಿವೇಶನಗಳಲ್ಲಿ ಈ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ಕೇಂದ್ರ ಸರ್ಕಾರ, ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆಯಲು ಕ್ರಮ ಕೈಗೊಂಡಿದೆ. ಇತ್ತೀಚೆಗಷ್ಟೇ ರಾಷ್ಟ್ರಪತಿಗಳು ಅಂಗೀಕಾರದ ಮುದ್ರೆ ಬಿದ್ದ ಬಳಿಕ ಈ ಮಸೂದೆ ಕಾನೂನಾಗಿ ರೂಪುಗೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಮುಖ್ಯಾಂಶಗಳು:
• ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ
• ಮಹಿಳಾ ಮೀಸಲಾತಿ ಮಸೂದೆ ಕಾನೂನಾಗಿ ಅಂಗೀಕಾರವಾಗಿದೆ
• ಮಸೂದೆಯನ್ನು ಇತ್ತೀಚೆಗೆ ಉಭಯ ಸದನಗಳು ಅಂಗೀಕರಿಸಿದ್ದವು.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನರೇಂದ್ರ ಮೋದಿ ಸರ್ಕಾರ ತಂದಿದ್ದ ಮಹಿಳಾ ಮೀಸಲಾತಿ ಮಸೂದೆ ಕಾನೂನಾಗಿ ಜಾರಿಗೆ ಬಂದಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದಾರೆ.
ಇದರೊಂದಿಗೆ, ಈ ಮಹಿಳಾ ಮೀಸಲಾತಿ ಮಸೂದೆಯು ಮಹಿಳಾ ಮೀಸಲಾತಿ ಕಾಯಿದೆಯಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮಸೂದೆಗೆ ಅಂಗೀಕಾರದ ಮುದ್ರೆ ಬಿದ್ದ ಬಳಿಕ ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹೊಸ ಮಹಿಳಾ ಮೀಸಲಾತಿ ಕಾಯ್ದೆಯ ಪ್ರಕಾರ ಲೋಕಸಭೆ ಹಾಗೂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸದಸ್ಯ ಸ್ಥಾನಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
128 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಭಾರತೀಯ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಗುರುವಾರ ಸಹಿ ಹಾಕಿದರು. ನಂತರ ಸಂವಿಧಾನದ 111ನೇ ಪರಿಚ್ಛೇದದ ಅಡಿಯಲ್ಲಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿತ್ತು.ಅಧ್ಯಕ್ಷೆ ದ್ರೌಪದಿ ಮುರ್ಮು ಶುಕ್ರವಾರ ಸಹಿ ಹಾಕಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇತ್ತೀಚೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ್ ಅಧಿನಿಯಂ ಅನ್ನು ಪರಿಚಯಿಸಿದ್ದರು.
ಸೆಪ್ಟೆಂಬರ್ 19 ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಸೆಪ್ಟೆಂಬರ್ 21 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ಆದರೆ, ಉಭಯ ಸದನಗಳಲ್ಲಿ ಯಶಸ್ವಿಯಾಗಿ ಅಂಗೀಕಾರಗೊಂಡ ಈ ನಾರಿ ಸರ್ತಿ ವಂದನ್ ಅಧಿನಿಯಂ ವಿಧೇಯಕ ರಾಷ್ಟ್ರಪತಿಯವರನ್ನು ತಲುಪಿತು.
ರಾಷ್ಟ್ರಪತಿಗಳೂ ಅನುಮೋದನೆ ನೀಡಿದ್ದರಿಂದ ಸುಮಾರು 3 ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಮೀಸಲಾತಿ ಮಸೂದೆಗೆ ತೆರೆ ಬಿದ್ದಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ಈ ಮಹಿಳಾ ಮೀಸಲಾತಿ ಕಾನೂನು ಜಾರಿಯಾಗುವ ಸಾಧ್ಯತೆ ಕಡಿಮೆ. ಏಕೆಂದರೆ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಈ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆ ಮೇಲಿನ ಚರ್ಚೆಯ ವೇಳೆ ಲೋಕಸಭೆಗೆ ತಿಳಿಸಿದರು.
1996ರಲ್ಲಿ ಅಂದಿನ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯ ಮುಂದೆ ಮೊದಲ ಬಾರಿಗೆ ತಂದಿತ್ತು. ಅದರ ನಂತರ, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸರ್ಕಾರಗಳ ಅವಧಿಯಲ್ಲಿ ಮಸೂದೆಯನ್ನು ಮಂಡಿಸಲಾಯಿತು, ಆದರೆ ಈ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವನ್ನು ಪಡೆದಿರಲಿಲ್ಲ. ಅಂತಿಮವಾಗಿ ಮಹಿಳಾ ಮೀಸಲಾತಿ ಮಸೂದೆಗೆ 2010ರಲ್ಲಿ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತರೂ ಲೋಕಸಭೆಯಲ್ಲಿ ಅದು ಬಾಕಿ ಉಳಿದಿತ್ತು. 2014ರಲ್ಲಿ ಆಗಿನ ಲೋಕಸಭೆಯನ್ನು ವಿಸರ್ಜಿಸಿದಾಗ ಮಸೂದೆ ಅಲ್ಲೇ ಕುಸಿದಿತ್ತು.