ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.22) : ಬಡತನ ಮತ್ತು ಹವಾಮಾನ ಬದಲಾವಣೆಗೆ ಸೌರಶಕ್ತಿಯಿಂದ ಮಾತ್ರ ಪರಿಹಾರ ಸಾಧ್ಯ ಎಂದು ಲೆಮೆಲ್ಸನ್ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ರಾಬ್ ಷೇಯ್ಡರ್ ತಿಳಿಸಿದರು.
ದವಳಗಿರಿ ಬಡಾವಣೆಯಲ್ಲಿರುವ ಗಾಯತ್ರಿ ಶಿವರಾಂ ಇನ್ನರ್‍ವೀಲ್ಹ್ ಭವನದಲ್ಲಿ ಸೆಲ್ಕೋ ಫೌಂಡೇಶನ್ ವತಿಯಿಂದ ನಿನ್ನೆ ನಡೆದ ಸೌರ ನವೋದ್ಯಮಿಗಳ ಮತ್ತು ಹೊಸ ತಂತ್ರಜ್ಞಾನಗಳ ಸಮಾಗಮ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಯಶಸ್ಸು ಕಂಡುಕೊಳ್ಳಲು ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಅಗತ್ಯವಿರುವುದರಿಂದ ಸೆಲ್ಕೋ ಫೌಂಡೇಶನ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಾಯತ್ರಿ ಶಿವರಾಂ ಮಾತನಾಡಿ ಮಹಿಳೆಯರು ತಮ್ಮಲ್ಲಿರುವ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಮುನ್ನುಗಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.
ನಬಾರ್ಡ್‍ನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಕವಿತಾ ಶಶಿಧರ್ ಮಾತನಾಡುತ್ತ ಮಾರುಕಟ್ಟೆ ಮತ್ತು ಉತ್ಪನ್ನ ಎರಡು ಕ್ಷೇತ್ರಗಳಲ್ಲಿಯೂ ಮಹಿಳೆಯರು ಹೆಚ್ಚು ಗಮನ ಹರಿಸಿದಾಗ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಭಿಯಾಗಿ ಬದುಕಬಹುದು. ಜೊತೆಗೆ ಕೃಷಿ, ಆಹಾರ ಉತ್ಪನ್ನಗಳ ತಯಾರಿಕೆಗೆ ಸರ್ಕಾರದಿಂದ ಅನೇಕ ಸೌಲಭ್ಯಗಳಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾಹಿತಿ ತಿಳಿದುಕೊಳ್ಳಬಹುದು ಎಂದರು.
ಸೆಲ್ಕೋ ಸಂಸ್ಥೆಯ ಡಿ.ಜಿ.ಎಂ. ಗುರುಪ್ರಕಾಶ್‍ಶೆಟ್ಟಿ, ಪ್ರಸನ್ನ ಹೆಗಡೆ, ಏರಿಯಾ ಮ್ಯಾನೇಜರ್ ಮಂಜುನಾಥ್ ಭಾಗ್ವತ್, ಸೆಲ್ಕೋ ಫೌಂಡೇಶನ್ ಅಧಿಕಾರಿ ಸ್ನೇಹ, ಸುಪ್ರಿಯಾಗೌಡ, ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಯಶಸ್ವಿ ಮಹಿಳಾ ಉದ್ಯಮಿಗಳ ಜೊತೆ ಸಂವಾದ ಏರ್ಪಡಿಸಲಾಗಿತ್ತು.
ಅನೇಕ ಉದ್ಯಮಿಗಳು ಹಾಗೂ ಹೊಸದಾಗಿ ಸ್ವಂತ ಉದ್ಯೋಗ ಕೈಗೊಳ್ಳುವ ನೂರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಕ್ತಿ ಆಧಾರಿತ ಕೃಷಿ, ಹೈನುಗಾರಿಕೆ, ಕೋಲ್ಡ್‍ಪ್ರೆಸ್ಡ್ ಎಣ್ಣೆಗಾಣ, ಕಿರು ಉದ್ಯಮಿಗಳಿಗೆ ಸಂಬಂಧಿಸಿದ 20 ಕ್ಕೂ ಹೆಚ್ಚು ತಂತ್ರಜ್ಞಾನಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.