ಕಾರವಾರ: ಕೊರೊನಾ ರೂಪಾಂತರಿ ಒಮಿಕ್ರಾನ್ ಹೆಚ್ಚಳ ಎಲ್ಲರನ್ನು ಭಯಗೊಳಿಸಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಒಮಿಕ್ರಾನ್ ನಿಂದ ತಪ್ಪಿಸಿಕೊಳ್ಳಲು ಸರ್ಕಾರ ಕೂಡ ಮುನ್ನೆಚ್ಚರಿಕಾ ಕ್ರಮವಹಿಸಿದೆ. ಗಡಿಭಾಗಗಳಲ್ಲಿ ಹೆಚ್ವಿನ ಕ್ರಮ ತೆಗೆದುಕೊಂಡಿದೆ.
ಉಡುಪಿ, ಮಂಗಳೂರು ಭಾಗದಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗುತ್ತಿದ್ದಂತೆ ಗಡಿ ಜಿಲ್ಲೆಯಲ್ಲಿ ಕಠಿಣ ನಿಯಮಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮುಂದಾಗಿದ್ದಾರೆ. ಈ ಹಿನ್ನೆಲೆ ವಿದೇಶದಿಂದ ಜಿಲ್ಲೆಗೆ ಆಗಮಿಸುವವರನ್ನು ಕ್ವಾರಂಟೈನ್ ಮಾಡಲಾಗಿದೆ. ಸದ್ಯ ಇತ್ತೀಚೆಗೆ ಬಂದ 17 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲೆಗೆ ಆಗಮಿಸಿರುವ 218 ಜನರ ಜಿನೋಮ್ ಸೀಕ್ವೆನ್ಸ್ ತಪಾಸಣೆಗೆ ಕಳುಹಿಸಿದೆ. ಓಮಿಕ್ರಾನ್ ಹೆಚ್ಚಾಗಿ ಕಂಡುಬಂದಿರುವ ದೇಶಗಳಿಂದ ಭಾರತಕ್ಕೆ ಆಗಮಿಸಿ ಅಲ್ಲಿಂದ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಜನರ ಮೇಲೆ ನಿಗಾ ವಹಿಸಲಾಗಿದ್ದು, ವಿದೇಶದಿಂದ ಬರುವ ಎಲ್ಲರನ್ನೂ ಕೂಡ ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಅವರನ್ನು ಹೋಂ ಐಸೋಲೇಶನ್ ಮಾಡಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.