ನವದೆಹಲಿ: ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ದಂಗೆ ಎಬ್ಬಿಸಿದ್ದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತು ಮಾಡಿದೆ. ಈ ಸಂಬಂಧ ಮಾತನಾಡಿರುವ ಒವೈಸಿ, ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಮುಂದಿನ ದಿನಗಳಲ್ಲಿ ದೊಡ್ಡ ನಾಯಕಿಯಾಗಿ ಬಿಂಬಿಸಲಾಗುವುದು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ, ನೂಪುರ್ ಶರ್ಮಾ ಅವರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಭಾರತದ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ನಾವು ಸಂವಿಧಾನದ ಪ್ರಕಾರ ಕ್ರಮವನ್ನು ಬಯಸಿದ್ದೇವೆ. ಮುಂಬರುವ ಆರು-ಏಳು ತಿಂಗಳಲ್ಲಿ ನೂಪುರ್ ಶರ್ಮಾ ಅವರನ್ನು ದೊಡ್ಡ ನಾಯಕಿನ್ನಾಗಿ ಮಾಡಲಾಗುವುದು ಎಂದು ನನಗೆ ತಿಳಿದಿದೆ. ನೂಪುರ್ ಶರ್ಮಾ ಅವರನ್ನು ದೆಹಲಿ ಸಿಎಂ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಒವೈಸಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬಿಜೆಪಿ ನೂಪುರ್ ಶರ್ಮಾ ಅವರನ್ನು ರಕ್ಷಿಸುತ್ತಿದೆ ಮತ್ತು ನಾವು ಪ್ರಧಾನಿಗೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.