ಬೆಂಗಳೂರು: ನಾವು ಅತ್ಯಂತ ಪ್ರಾಮಾಣಿಕತೆಯಿಂದ ಡ್ರಗ್, ಮನಿಲಾಂಡರಿಂಗ್ ಹಾಗು ಬಿಟ್ಕಾಯಿನ್ ಪ್ರಕರಣಗಳ ತನಿಖೆ ಮಾಡುತ್ತಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಕಾನೂನು ಪ್ರಕಾರವೇ ಎಲ್ಲವೂ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿರುವ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರ ನಡೆಯುತ್ತಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.ಸಿದ್ದರಾಮಯ್ಯನವರು ಸಾಕ್ಷ್ಯ ಇಟ್ಟು ಮಾತಾಡಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ತರವಲ್ಲ. ಅವರ ಬಳಿ ಸಾಕ್ಷಿ ಇದ್ದರೆ ಕೊಡಲಿ, ಅದನ್ನೂ ತನಿಖೆ ಮಾಡುತ್ತೇವೆ. ಸೂತ್ರವಿಲ್ಲದೆ ಪಟ ಬಿಡಲು ಹೋಗಬಾರದು ಎಂದು ವಿಪಕ್ಷ ನಾಯಕರಿಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟರು.
ನಾನು ಡ್ರಗ್ ವಿರುದ್ಧ ವಾರ್ ಡಿಕ್ಲೇರ್ ಮಾಡಿದ್ದೇನೆ. ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ಸೀಜ್ ಮಾಡಲಾಗಿದೆ. ಕಾನೂನಿನನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕೇಸ್ ಹಾಕಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ಜತೆಗೆ ಹ್ಯಾಕಿಂಗ್ ಮಾಡುತ್ತಿದ್ದ ಶ್ರೀಕೃಷ್ಣನನ್ನು ಬಂಧಿಸಲಾಗಿದೆ ಎಂದರು. 2018 ರ ಫೆಬ್ರವರಿಯಲ್ಲಿ ಶ್ರೀಕೃಷ್ಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಕೇಸ್ ಫೈಲ್ ಆಗಿರುತ್ತದೆ. ಆತನ ಜತೆಯಿದ್ದ ಐದಾರು ಜನರ ಬಂಧನವಾಗುತ್ತದೆ. ಆದರೆ, ಶ್ರೀಕೃಷ್ಣನ ಬಂಧನ ಆಗಿರಲಿಲ್ಲ. ಆಗ ಯಾವ ಸರ್ಕಾರವಿತ್ತು ಅನ್ನೋದನ್ನ ಗಮನಿಸಿ. ನಂತರ ಆತನಿಗೆ ಬೇಲ್ ಸಿಗುತ್ತೆ, ಬೇಲ್ ಸಿಕ್ಕ ಬಳಿಕವೂ ಕರೆಸಿ ವಿಚಾರಣೆ ಮಾಡಲ್ಲ. ಯುಬಿ ಸಿಟಿ ದಾಂಧಲೆ ಪ್ರಕರಣದಲ್ಲಿ ಆತನ ಬಂಧನವಾಗಿರುತ್ತದೆ. ಆಗಲೇ ಸರಿಯಾಗಿ ವಿಚಾರಣೆ ಮಾಡಿದ್ದಿದ್ರೆ, ಆತನ ಇತರೆ ದುಷ್ಕೃತ್ಯ, ಡ್ರಗ್ ವಿಚಾರ ಬಯಲಿಗೆ ಬರ್ತಿತ್ತು ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.