ಚಿತ್ರದುರ್ಗ, (ಜ.01): 2023ರ ಹೊಸ ವರ್ಷಾಚರಣೆ ಎಲ್ಲೆಡೆ ಜೋರಾಗಿದೆ. ಈ ಬಾರಿ ಕೋಟೆನಾಡಿನ ಜನರು ಸೇರಿದಂತೆ ಬೇರೆಡೆಯಿಂದ ಬಂದ ಪ್ರವಾಸಿಗರು ಸಂಭ್ರಮಾಚರಣೆಯನ್ನು ವಿಶೇಷವಾಗಿ ಕೋಟೆಯಲ್ಲಿ ಆಚರಿಸಿರುವುದು ವಿಶೇಷ.
ಅದರಲ್ಲೂ ಈ ಬಾರಿ ಹೊಸವರ್ಷ ಭಾನುವಾರವಾಗಿದ್ದರಿಂದ ಕೋಟೆ ನೋಡಲು ಹೆಚ್ಚು ಪ್ರವಾಸಿಗರು ವೀಕ್ಷಣೆ ಮಾಡುವ ಮೂಲಕ 2023 ನೇ ವರ್ಷದ ಸಂಭ್ರಮ ಆಚರಿಸಿದ್ದಾರೆ.
ಬೆಳಿಗ್ಗೆಯಿಂದಲೇ ಕೋಟೆಯತ್ತ
ಯುವಕ- ಯುವತಿಯರು, ಸ್ನೇಹಿತರು, ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಸಾವಿರಾರು ಪ್ರವಾಸಿಗರು ವೀಕ್ಷಿಸಿದ್ದು, ಕೇಕ್ ಕತ್ತರಿ, ಸಿಹಿ ಹಂಚುವ ಮೂಲಕ ಪರಸ್ಪರ ಹೊಸ ವರ್ಷದ ವಿನಿಮಯದ ಸಂಭ್ರಮಚಾರಣೆ ಆಚರಿಸುವ ದೃಶ್ಯ ಸಾಮಾನ್ಯವಾಗಿತ್ತು.
ಕೋಟೆಯೊಳಗಿನ ಗೋಪಾಲಸ್ವಾಮಿ ದೇವಸ್ಥಾನ, ಓಬ್ಬವನ ಕಿಂಡಿ, ಉಯ್ಯಾಲೆ ಕಂಬ ಮುಂತಾದ ಸ್ಥಳಗಳಲ್ಲಿ ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂತು.
ಹಾಗೂ ಚಂದ್ರವಳ್ಳಿ, ಮತ್ತಿತರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕಂಡು ಬಂದರು.
ಬೆಳಿಗ್ಗೆಯಿಂದಲೇ ನಗರದ ನೀಲಕಂಠೇಶ್ವರ ದೇವಸ್ಥಾನ, ಬರಗೇರಮ್ಮ ದೇವಸ್ಥಾನ, ಉತ್ಸವಾಂಬ ದೇವಸ್ಥಾನ, ಜೆಸಿಆರ್ ಗಣಪತಿ ದೇವಾಲಯ, ಹೊಳಲ್ಕೆರೆ ರಸ್ತೆಯ ಪಿ ಅಂಡ್ ಟಿ ಕ್ವಾರ್ಟರ್ಸ್ ಬಳಿಯ ಗಣಪತಿ ದೇವಾಲಯ, ಕೆಳಗೋಟೆಯ ಶ್ರೀ ವೆಂಕಟೇಶ್ವರ ದೇವಾಲಯ, ತುರುವನೂರು ರಸ್ತೆಯ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ ಮಾರಮ್ಮ ದೇವಸ್ಥಾನ ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದರು.
ಬೆಳಗಿನಿಂದಲೂ ಭಕ್ತರು ದೇವರ ದರ್ಶನ ಪಡೆದರು.
ಹಿರಿಯೂರು ನಗರದ ಶ್ರೀ ತೇರು ಮಲ್ಲೇಶ್ವರ ದೇವಾಲಯ, ತಾಲ್ಲೂಕಿನ ಶ್ರೀ ಕ್ಷೇತ್ರ ವದ್ಧಿಕೆರೆ ಸಿದ್ದೇಶ್ವರ ದೇವಾಲಯ, ವಾಣಿವಿಲಾಸಪುರ ಬಳಿ ಇರುವ ಮಾರಿಕಣಿವೆ ಜಲಾಶಯ, ಕಣಿವೆ ಮಾರಮ್ಮ ದೇವಿ ಹಾಗೂ ಹಾರನಕಣಿವೆ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರಿಂದ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಕಂಡು ಬಂದಿತ್ತು.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಭಕ್ತರು ಬೆಳಗಿನಿಂದಲೂ ದರ್ಶನ ಪಡೆದರು.
ಇತ್ತ ಹೊಳಲ್ಕೆರೆಯಲ್ಲೂ ಗಣಪತಿ ದೇವಾಲಯ, ಹೆಚ್.ಡಿ. ಪುರದ ಲಕ್ಮೀ ರಂಗನಾಥ ಸ್ವಾಮಿ ದೇವಾಲಯ,
ಸಹ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.
ಒಟ್ಟಾರೆಯಾಗಿ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕರೋನ ಆತಂಕ ಕಡಿಮೆಯಾಗಿರುವುದರಿಂದ ಪ್ರವಾಸಿಗರು ಜಿಲ್ಲೆಯ ಪ್ರಮುಖ ದೇವಾಲಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹೆಚ್ಚು ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಿದ್ದು ವಿಶೇಷ.