ಮನಸ್ಸಿಗೆ ಹೆಚ್ಚು ಬೇಸರವಾದಾಗ ಸಂಗೀತ ಕೇಳೋದು ಸಾಕಷ್ಟು ಜನರ ಅಭ್ಯಾಸ. ಆದ್ರೆ ಕೆಲವೊಂದು ಹಾಡುಗಳು, ಅದರೊಳಗಿನ ಸಾಹಿತ್ಯ ಒಮ್ಮೊಮ್ಮೆ ಮನಸ್ಸನ್ನ ಡಿಸ್ಟರ್ಬ್ ಮಾಡದೆ ಇರದು. ಅಂತದ್ದೊಂದು ಹಾಡು ಇದೀಗ ಕನ್ನೇರಿ ತಂಡದಿಂದ ರಿಲೀಸ್ ಆಗಿದೆ. ‘ನೆಲೆ ಇರದ ಕಾಲು’ ಹಾಡನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕಾಡಿನ ಜನರ ಬದುಕು ಬವಣೆಯನ್ನು ಈ ಹಾಡಿನಲ್ಲಿ ಅಚ್ಚತ್ತೊಲಾಗಿದೆ. ಹುಟ್ಟಿದ ಕಡೆ ನೆಲೆ ಸಿಗದೆ ಹೋದಲ್ಲಿ, ನೆಲೆಗಾಗಿ ಊರೂರು ಅಲೆಯಲೇಬೇಕಾಗುತ್ತದೆ. ಅಲೆಯುವಾಗ ನನ್ನವರೆನ್ನುವವರು ಸಿಗುತ್ತಾರಾ..? ಪ್ರೀತಿ ಬಾಂಧವ್ಯವ ಕೊರತೆ ನೀಗಿಸುತ್ತಾರಾ..? ಹಸಿವಾದಾಗ ಹೊಟ್ಟೆ ತುಂಬಿಸುತ್ತಾರಾ..? ಹುಡುಕ ಹೊರಟ ನೆಲೆ ಸಿಗುವವರೆಗೂ ಅವರ ಪಾಡು ಹೇಗಿರುತ್ತೆ ಅನ್ನೋ ಅಂದಾಜು ಯಾರಿಗೂ ಇರಲ್ಲ. ಅದರಲ್ಲೂ ಹೆಣ್ಣು ಮಗಳೊಬ್ಬಳು ನೆಲೆ ಕಂಡುಕೊಳ್ಳಲು ಹೊರಟಾಗ ಆಕೆಯ ನೋವು ಆಕೆಗೆ ತಿಳಿಯಬೇಕು. ‘ ಕನ್ನೇರಿ’ ಸಿನಿಮಾದ ‘ನೆಲೆ ಇರದ ಕಾಲು ಹುಡುಕುತಿದೆ ಬಾಳು’ ಹಾಡು ಮಾತ್ರ ಆ ನೈಜತೆಯನ್ನ ತೋರಿಸುತ್ತಿದೆ.
ನಿಮ್ಗೆಲ್ಲಾ ಈಗಾಗ್ಲೇ ಕನ್ನೇರಿ ಬಗ್ಗೆ ಪರಿಚಯವಾಗಿಯೇ ಇರುತ್ತೆ. ಯಾಕಂದ್ರೆ ಆ ಸಿನಿಮಾದ ಕಥೆ ಅಂತದ್ದು. ದಿಡ್ಡಳ್ಳಿ ಜನರ ಬದುಕು-ಬವಣೆ, ನೋವು, ಬದುಕಿಗಾಗಿ ಅವರ ಹುಡುಕಾಟ ಇದೆಲ್ಲವನ್ನು ಒಳಗೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ದಿಡ್ಡಳ್ಳಿ ಸಂತ್ರಸ್ತರು ತಮ್ಮ ಬದುಕಿಗಾಗಿ ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಆದ್ರೆ ಆ ಹೋರಾಟದ ಬಳಿಕ ಅವರ ಬದುಕು ಏನಾಯ್ತು ಯಾರಿಗೂ ಗೊತ್ತಿಲ್ಲ. ಅಲ್ಲಿನ ಹೆಣ್ಣು ಮಕ್ಳಳ ಪರಿಸ್ಥಿತಿ ಏನಾಯ್ತು ತಿಳಿದಿಲ್ಲ. ಆದ್ರೆ ಅದನ್ನೆಲ್ಲ ನೀನಾಸಂ ಮಂಜು ಎಲ್ಲರಿಗೂ ನೆನಪಿಸಲು ಹೊರಟಿದ್ದಾರೆ. ಆ ನೈಜ ಘಟನೆಯಾಧಾರಿತ ಸಿನಿಮಾವೇ ಕನ್ನೇರಿ.
ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ‘ಕನ್ನೇರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅರುಣ್ ಸಾಗರ್, ಅನಿತ ಭಟ್, ಸರ್ದಾರ್ ಸತ್ಯ, ಎಂ.ಕೆ.ಮಠ್, ಕರಿಸುಬ್ಬು ತಾರಾಬಳಗದಲ್ಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ.